ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಇಲ್ಲಿನ ಖಾಸಗಿ ಕಾಲೇಜೊಂದರ ಹಾಸ್ಟೆಲ್‌ಕೊಠಡಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ವಿಜಯನಗರ ಜಿಲ್ಲೆಯ ಕುರುವತ್ತಿ ಗ್ರಾಮದ ನಿಂಗಪ್ಪ ಎಂಬುವರ ಪುತ್ರಿ, 17 ವರ್ಷದ ರಂಜಿತಾ ಮೃತಪಟ್ಟ ದುರ್ದೈವಿ. ಈ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿರುವ ಮೃತಳ ಪೋಷಕರು ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
3 ಅಡಿ ಎತ್ತರದ ಕಿಟಕಿಯಲ್ಲಿ ನೇಣು: ತಂದೆಯ ತೀವ್ರ ಆಕ್ರೋಶ
ಕಳೆದ ಒಂದೂವರೆ ವರ್ಷದಿಂದ ದಾವಣಗೆರೆಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ, ಬುಧವಾರ ರಾತ್ರಿ ಹಾಸ್ಟೆಲ್ ಕೊಠಡಿಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹವನ್ನು ಚಿಗಟೇರಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಮಗಳ ಸಾವಿನ ಕುರಿತು ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ ತಂದೆ ನಿಂಗಪ್ಪ, "ನನ್ನ ಮಗಳನ್ನು ಹೊಡೆದು ಕೊಲೆ ಮಾಡಿ, ನಂತರ ನೇಣು ಹಾಕಿದ್ದಾರೆ. ಕೇವಲ ಮೂರು ಅಡಿ ಎತ್ತರದ ಕಿಟಕಿಯಲ್ಲಿ ಮಂಡಿ ನೆಲಕ್ಕೆ ತಾಗುವಂತೆ ನೇಣು ಹಾಕಿಕೊಂಡು ಸಾವನ್ನಪ್ಪಲು ಹೇಗೆ ಸಾಧ್ಯ? 10 ಅಡಿ ಎತ್ತರದಲ್ಲಿದ್ದರೆ ಸ್ವಇಚ್ಛೆಯಿಂದ ಮಾಡಿಕೊಂಡಿದ್ದಾಳೆ ಎಂದು ಭಾವಿಸಬಹುದಿತ್ತು. ಇದು ಖಂಡಿತವಾಗಿಯೂ ಕೊಲೆ. ನಮಗೆ ನ್ಯಾಯ ಬೇಕು. ರಾತ್ರಿ 8:30ಕ್ಕೆ ನಮಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ, ಹಾಸ್ಟೆಲ್ ಸಿಬ್ಬಂದಿ ನಮ್ಮನ್ನು ಭೇಟಿಯಾಗುವ ಸೌಜನ್ಯವನ್ನೂ ತೋರಿಲ್ಲ" ಎಂದು ಆರೋಪಿಸಿದ್ದಾರೆ.
ಮೃತಳ ಸಂಬಂಧಿ ಗಣೇಶ್ ಮಾತನಾಡಿ, "ರಂಜಿತಾ ಹೈಸ್ಕೂಲ್‌ನಲ್ಲಿ ರ‍್ಯಾಂಕ್ ಬಂದಿದ್ದ ಪ್ರತಿಭಾವಂತ ವಿದ್ಯಾರ್ಥಿನಿ. ನಿತ್ಯ ಮನೆಗೆ ಕರೆ ಮಾಡುತ್ತಿದ್ದಳು. ಕಳೆದ ವಾರವಷ್ಟೇ ಮನೆಗೆ ಬಂದು ಶನಿವಾರ ಕಾಲೇಜಿಗೆ ಮರಳಿದ್ದಳು. ಅವಳು ಎಲ್ಲರೊಂದಿಗೂ ಚೆನ್ನಾಗಿದ್ದಳು. ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಒತ್ತಾಯಿಸಿದರು.
ಕಾಲೇಜು ಆಡಳಿತ ಮಂಡಳಿ ಹೇಳುವುದೇನು?
ಘಟನೆ ಕುರಿತು ಪ್ರತಿಕ್ರಿಯಿಸಿದ ಕಾಲೇಜಿನ ಚೇರ್ಮನ್ ಮಂಜಪ್ಪ, "ರಂಜಿತಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದಳು. ಊರಿನಿಂದ ಮರಳಿದ ಬಳಿಕ ಆಕೆ ಸ್ವಲ್ಪ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ಬಂದಿತ್ತು. ಬುಧವಾರ ಸಂಜೆ 5:45ರ ಸುಮಾರಿಗೆ ಆರೋಗ್ಯ ಸಮಸ್ಯೆ ಎಂದು ಹೇಳಿ ಕಾಲೇಜಿನಿಂದ ಅನುಮತಿ ಪಡೆದು ಮತ್ತೊಬ್ಬ ವಿದ್ಯಾರ್ಥಿನಿಯೊಂದಿಗೆ ಹಾಸ್ಟೆಲ್‌ಗೆ ತೆರಳಿದ್ದಳು. ರಾತ್ರಿ 8:30ರ ಸುಮಾರಿಗೆ ಅನುಮಾನ ಬಂದು ಸ್ನೇಹಿತರು ಕೊಠಡಿಯ ಬಾಗಿಲು ತಟ್ಟಿದರೂ ಸ್ಪಂದಿಸದಿದ್ದಾಗ, ವಾರ್ಡನ್ ಸಹಾಯದಿಂದ ಬಾಗಿಲು ಮುರಿದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ" ಎಂದಿದ್ದಾರೆ.
ಅಲ್ಲದೆ, "ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ. ಸಂಸ್ಥೆಯ ಕಡೆಯಿಂದಾಗಲಿ ಅಥವಾ ಪೋಷಕರ ಕಡೆಯಿಂದಾಗಲಿ ಯಾವುದೇ ಒತ್ತಡ ಇರಲಿಲ್ಲ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ತನಿಖೆ ಮುಂದುವರಿಸಿದ ಪೊಲೀಸರು: ಈ ಕುರಿತು ಮಾಹಿತಿ ನೀಡಿದ ವಿದ್ಯಾನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿಲ್ಪಾ, "ವಿದ್ಯಾರ್ಥಿನಿಯ ಕೊಲೆಯಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ. ಕಾಲೇಜಿನವರು ಇದು ಆತ್ಮಹತ್ಯೆ ಎನ್ನುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದ್ದು, ತನಿಖೆಯ ನಂತರವೇ ಸತ್ಯಾಸತ್ಯತೆ ಹೊರಬರಲಿದೆ" ಎಂದು ತಿಳಿಸಿದ್ದಾರೆ. ಪರಿಶೀಲನೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.




