ಚಂದ್ರವಳ್ಳಿ ನ್ಯೂಸ್ ಚಿತ್ರದುರ್ಗ: ಜಮೀನಿನ ಆದೇಶ ಪ್ರತಿ (Post of Order) ನೀಡಲು ದೂರುದಾರರಿಂದ 25,000 ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಉಪವಿಭಾಗಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ (FDA) ಬಸವರಾಜ ಹೆಚ್. ಜಿ. ಎಂಬುವವರು ಲೋಕಾಯುಕ್ತ ಪೋಲಿಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಪ್ರಕರಣದ ಹಿನ್ನೆಲೆ: ಹೊಸದುರ್ಗ ತಾಲೂකಿನ ಕೆಲಗುಹಾ ಗ್ರಾಮದ ನಿವಾಸಿ ಟಿ. ಹನುಮಂತಪ್ಪ ಎಂಬುವವರು ತಮ್ಮ ತಂದೆಗೆ ಸರ್ಕಾರದಿಂದ ಮಂಜೂರಾಗಿದ್ದ 2 ಎಕರೆ ಜಮೀನಿನ ಸಾಗುವಳಿ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿ.ಟಿ.ಸಿ.ಎಲ್. ಕಾಯ್ದೆಯಡಿ ಆದೇಶ ಪಡೆಯಲು ಚಿತ್ರದುರ್ಗ ಉಪವಿಭಾಗಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮುಗಿದು 'Post of Order' ಆದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.
ಆದರೆ, ಎಫ್.ಡಿ.ಎ ಆಗಿ ಕೆಲಸ ಮಾಡುತ್ತಿದ್ದ ಬಸವರಾಜ ಅವರು ಆದೇಶ ಮಾಡಿಸಲು ವಿಳಂಬ ಮಾಡುತ್ತಾ, 30,000 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರಂತೆ ದೂರುದಾರ ಹನುಮಂತಪ್ಪ ಅವರು ದಿನಾಂಕ 07-09-2026 ರಂದು 5,000 ರೂ. ನೀಡಿದ್ದರು. ಉಳಿದ 25,000 ರೂ. ನೀಡದ ಹೊರತು ಕೆಲಸ ಮಾಡಿಕೊಡುವುದಿಲ್ಲ ಎಂದು ತಿಳಿಸಿದ್ದರಿಂದ, ಲಂಚ ನೀಡಲು ಇಷ್ಟವಿಲ್ಲದ ಹನುಮಂತಪ್ಪ ಅವರು ಚಿತ್ರದುರ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲೋಕಾಯುಕ್ತ ದಾಳಿ: ದೂರಿನ ಅನ್ವಯ 21-09-2026 ರಂದು ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಪೊಲೀಸ್ ಅಧೀಕ್ಷಕರಾದ (ಪ್ರಭಾರ) ಎಂ.ಎಸ್. ಕೌಲಾಪುರೆ ಅವರ ಮಾರ್ಗದರ್ಶನದಲ್ಲಿ ದಾಳಿ ಯೋಜಿಸಿದ್ದರು. ಸಾಂಯಕಾಲ ದೂರುದಾರರಿಂದ 25,000 ರೂ. ಲಂಚದ ಹಣವನ್ನು ಪಡೆದು ಆಟೋರಿಕ್ಷಾದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಬಸವರಾಜ ಹೆಚ್. ಜಿ. ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದು ಬಂಧಿಸಿದ್ದಾರೆ.
ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.




