ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅಡಿಯಲ್ಲಿ ಆಲಮಟ್ಟಿ ಜಲಾಶಯದ ನೀರು ಶೇಖರಣಾ ಮಟ್ಟವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸುವ ಪ್ರಕ್ರಿಯೆಗೆ ವೇಗ ದೊರೆತಿದೆ. ಜಲಾಶಯದ ಎತ್ತರ ಹೆಚ್ಚಳದಿಂದಾಗಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಭೂಸ್ವಾಧೀನ ಹಾಗೂ ಪುನರ್ವಸತಿ ಪ್ರಕ್ರಿಯೆಗಳ ಕುರಿತು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಉನ್ನತ ಮಟ್ಟದ ಸಭೆ ಜರುಗಿತು.
ಸಚಿವರಾದ ಎಂ. ಬಿ. ಪಾಟೀಲ್, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಂಬಂಧಪಟ್ಟ ಜಿಲ್ಲೆಗಳ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಯೋಜನೆಯ ಪ್ರಸ್ತುತ ಪ್ರಗತಿ ಮತ್ತು ಭೂಸ್ವಾಧೀನ ಪ್ರಕ್ರಿಯೆಯ ಸವಾಲುಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.
ಯುಕೆಪಿ-3 ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವುದರ ಜೊತೆಗೆ, ಯೋಜನೆಯಿಂದಾಗಿ ಭೂಮಿ ಕಳೆದುಕೊಳ್ಳುವ ರೈತರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ಹಾಗೂ ಸೂಕ್ತ ಪುನರ್ವಸತಿ ಕಲ್ಪಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.




