ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಅನುದಾನ ಬಳಕೆ ಹಾಗೂ ಅಕ್ರಮಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಶ್ವೇತಪತ್ರ ಹೊರಡಿಸುವಂತೆ ಮಾಜಿ ಸಚಿವರೂ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಅವರು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾಮಗಾರಿಯ ಅಂದಾಜು ವೆಚ್ಚ, ಗುತ್ತಿಗೆದಾರರ ವಿವರ ಹಾಗೂ ಕಾಮಗಾರಿ ನಡೆಯುವ ಸ್ಥಳದಲ್ಲಿ ಸಂಪೂರ್ಣ ಮಾಹಿತಿ ಒಳಗೊಂಡ ನಾಮಫಲಕ (ಬೋರ್ಡ್) ಅಳವಡಿಸಬೇಕು ಮತ್ತು ಸರ್ಕಾರಿ ಹಣದ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಾಮಗಾರಿ ಸ್ಥಳಗಳಲ್ಲಿ ನಾಮಫಲಕ ಕಡ್ಡಾಯ: ಸಾರ್ವಜನಿಕರ ಹಣ ದುರುಪಯೋಗವಾಗದಂತೆ ತಡೆಯಲು ಹೊಳಲ್ಕೆರೆ ಕ್ಷೇತ್ರದಲ್ಲಿ ಕೆಎಂಇಆರ್‌ಸಿ, ಡಿಎಂಎಫ್ ಸೇರಿದಂತೆ ವಿವಿಧ ಇಲಾಖೆಗಳಿಂದ ನಡೆಯುತ್ತಿರುವ ಕಾಮಗಾರಿಗಳ ವೆಚ್ಚ, ಗುತ್ತಿಗೆದಾರರ ಹೆಸರು ಮತ್ತು ವಿವರಗಳನ್ನು ಸಾರ್ವಜನಿಕರಿಗೆ ತಿಳಿಯುವಂತೆ ಫಲಕ ಹಾಕಬೇಕು.
ವಿವಿಧ ನಿಗಮ ಹಾಗೂ ಇಲಾಖೆಗಳ ಅನುದಾನ ದುರುಪಯೋಗ ಆರೋಪ: ಕೆಎಂಇಆರ್‌ಸಿ ಅನುದಾನ: ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕಾದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಬೇರೆ ಸ್ಥಳಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದು, ಇದರ ಪೂರ್ಣ ವಿವರ ನೀಡುವಂತೆ ಕೋರಿದ್ದಾರೆ.
ಡಿಎಂಎಫ್ ನಿಧಿ: ಜಿಲ್ಲಾ ಖನಿಜ ನಿಧಿ ಅನುದಾನ ಬಳಕೆಯಲ್ಲಿ ದುರ್ಬಳಕೆ ಹಾಗೂ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಕುರಿತು ಸೂಕ್ತ ತನಿಖೆಯಾಗಬೇಕು.
ವಿಜೆಎನ್‌ಎಲ್ ಹಾಗೂ ಸಣ್ಣ ನೀರಾವರಿ: ಕೆರೆಗಳ ಹೂಳೆತ್ತುವುದು, ಚೆಕ್ ಡ್ಯಾಂ ನಿರ್ಮಾಣ, ಹಳ್ಳಗಳ ದುರಸ್ತಿ ಹಾಗೂ ರಸ್ತೆ ಕಾಮಗಾರಿಗಳ ಅಂದಾಜು ವೆಚ್ಚ, ಗುತ್ತಿಗೆದಾರರ ವಿವರ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಮಾಹಿತಿ ನೀಡಬೇಕು.
ಅಪ್ಪರ್ ಭದ್ರಾ ಯೋಜನೆ: ಯೋಜನೆಯಡಿ ಎಷ್ಟು ಕೆರೆಗಳಿಗೆ ನೀರು ತುಂಬಿಸಲಾಗಿದೆ ಮತ್ತು ಬಿಡುಗಡೆಯಾದ ಅನುದಾನವೆಷ್ಟು ಎಂಬ ವಿವರ.
ನಿರ್ಮಿತಿ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿ: ನಿರ್ಮಿತಿ ಕೇಂದ್ರದಲ್ಲಿ ಮಾಜಿ ಜಿಲ್ಲಾಧಿಕಾರಿಗಳ ಸಂಬಂಧಿಗಳ ಶಾಮೀಲಾತಿಯಿಂದ ಕಾಮಗಾರಿ ನಡೆಸಲಾಗಿದೆ ಎಂಬ ದೂರುಗಳಿದ್ದು, ಹಾಗೂ KRIDL ನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆಪಾದನೆಗಳ ಕುರಿತು ವಿವರ ನೀಡಬೇಕು.
ಲೋಕೋಪಯೋಗಿ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್: ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಮತ್ತು ಶಾಸಕರ ಅನುದಾನದಡಿ ಬಿಡುಗಡೆಯಾದ ಹಣ ಹಾಗೂ ಕೈಗೊಂಡ ಕಾಮಗಾರಿಗಳ ಪೂರ್ಣ ಪಟ್ಟಿ ನೀಡಬೇಕು.
ಪಾರದರ್ಶಕತೆಗೆ ಆಗ್ರಹ:
ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 2018 ರಿಂದ ಇಲ್ಲಿಯವರೆಗಿನ ಎಲ್ಲಾ ಕಾಮಗಾರಿಗಳು, ಶಾಲಾ ಕಟ್ಟಡಗಳು, ಕುಡಿಯುವ ನೀರಿನ ಯೋಜನೆಗಳ ಸಂಪೂರ್ಣ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಜಿಲ್ಲಾಧಿಕಾರಿಗಳು ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ ಶ್ವೇತಪತ್ರ ಹೊರಡಿಸುವ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಎಚ್. ಆಂಜನೇಯ ಅವರು ಮನವಿ ಮಾಡಿದ್ದಾರೆ.




