ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಜಲಾಶಯಗಳಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕ ಸಿ.ಟಿ. ರವಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ನಮ್ಮ ನೀರು, ನಮ್ಮ ಹಕ್ಕು' ಎಂಬ ಹೇಳಿಕೆಯನ್ನು ಮುಖ್ಯಮಂತ್ರಿಗಳು ಕೊಂಚ ಬದಲಿಸಿ, 'ನಮ್ಮ ನೀರು, ತಮಿಳುನಾಡಿನ ಹಕ್ಕು' ಎಂದು ಹೇಳುವುದು ಒಳಿತು ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪ್ರಕಟಣೆ ಹೊರಡಿಸಿರುವ ಸಿ.ಟಿ. ರವಿ, ಸರ್ಕಾರದ ವಿರುದ್ಧ ಪ್ರಮುಖ ಆರೋಪಗಳನ್ನು ಮಾಡಿದ್ದಾರೆ.
ಕುಡಿಯುವ ನೀರಿಗೆ ಆತಂಕ: ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಕಬಿನಿ ಜಲಾಶಯ ಈಗಾಗಲೇ ಶೇಕಡಾ ೩೦ ರಷ್ಟು ಬರಿದಾಗಿದೆ. ಪ್ರತಿದಿನ ತಮಿಳುನಾಡಿಗೆ ಸುಮಾರು ೧೪,೦೦೦ ಕ್ಯೂಸೆಕ್ ನೀರು ಹರಿಸುತ್ತಿರುವುದರಿಂದ ರಾಜ್ಯದಲ್ಲಿ ಕುಡಿಯುವ ನೀರಿಗೂ ಪರದಾಟ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಸರ್ಕಾರದ ವೈಫಲ್ಯ: ನ್ಯಾಯಾಧೀಕರಣದ ಮುಂದೆ ರಾಜ್ಯದಲ್ಲಿರುವ ಭೀಕರ ಬರ ಪರಿಸ್ಥಿತಿಯನ್ನು ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.
ರೈತರ ಹಿತರಕ್ಷಣೆ ನಿರ್ಲಕ್ಷ್ಯ: "ಜಲಾಶಯಗಳ ನೀರನ್ನು ನಂಬಿ ಬೆಳೆ ಬೆಳೆಯಬೇಡಿ" ಎಂದು ನಮ್ಮ ರಾಜ್ಯದ ರೈತರಿಗೆ ಸಲಹೆ ನೀಡಿದ್ದ ಮುಖ್ಯಮಂತ್ರಿಗಳು, ತಮಿಳುನಾಡಿನ ರೈತರು ಬೆಳೆ ಬೆಳೆಯಲು ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರವು ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟು, ತಕ್ಷಣವೇ ನಮ್ಮ ರೈತರ ಮತ್ತು ಸಾರ್ವಜನಿಕರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರ ಕಣ್ಣೀರಿಗೆ ಸರ್ಕಾರ ಬೆಲೆ ತೆರಬೇಕಾಗುತ್ತದೆ ಎಂದು ಸಿ.ಟಿ. ರವಿ ಎಚ್ಚರಿಸಿದ್ದಾರೆ.




