ಚಂದ್ರವಳ್ಳಿ ನ್ಯೂಸ್, ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದ ಕೃಷಿ ಸಾಮರ್ಥ್ಯಕ್ಕೆ ತಂತ್ರಜ್ಞಾನದ ಸ್ಪರ್ಶ ನೀಡಿ, ರೈತರು ಹಾಗೂ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರು ಬಯೋಇನೋವೇಶನ್ ಸೆಂಟರ್ ಜೊತೆ ಕಲಬುರಗಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ 'ಕಲ್ಯಾಣ ಕರ್ನಾಟಕ ಬಯೋ-ಇಕಾನಮಿ ಮಿಷನ್' ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಏಳು ಜಿಲ್ಲೆಗಳಲ್ಲಿ ಕೃಷಿ ಉದ್ಯಮಕ್ಕೆ ವೇಗ: ಈ ಯೋಜನೆಯು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಟಿಶ್ಯೂ ಕಲ್ಚರ್, ದೇಶೀಯ ಜೈವಿಕ ಪರಿಕರಗಳ ಬಳಕೆ ಮತ್ತು ಮೌಲ್ಯವರ್ಧಿತ ಆಹಾರ ಸಂಸ್ಕರಣೆಗೆ ಹೆಚ್ಚಿನ ಒತ್ತು ನೀಡಲಿದೆ.
ಸ್ಥಳೀಯ ಬೆಳೆಗಳ ಅಭಿವೃದ್ಧಿ: ಪ್ರತಿಯೊಂದು ಪ್ರದೇಶದ ವಿಶಿಷ್ಟ ಬೆಳೆಗಳನ್ನು ಗುರುತಿಸಿ ಅವುಗಳ ಮೌಲ್ಯವರ್ಧನೆ ಮಾಡುವುದು ಈ ಮಿಷನ್‌ನ ಪ್ರಮುಖ ಗುರಿ.
ಕಮಲಾಪುರ ಬಾಳೆ ತಳಿಗೆ ಹೊಸ ಸ್ಪರ್ಶ: ಕಲಬುರಗಿಯ ಪ್ರಸಿದ್ಧ ಕಮಲಾಪುರ ಬಾಳೆಗೆ ಟಿಶ್ಯೂ ಕಲ್ಚರ್ ತಂತ್ರಜ್ಞಾನ ಬಳಸಿ, ರೋಗರಹಿತ ಹಾಗೂ ಉತ್ತಮ ಇಳುವರಿ ನೀಡುವ ಸಸಿಗಳನ್ನು ಪೂರೈಸಲಾಗುವುದು. ಜೊತೆಗೆ ಬಾಳೆಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಲಾಗುವುದು.
ಬೇಳೆಕಾಳುಗಳ ಸಂಸ್ಕರಣೆ: ಈ ಭಾಗದ ಪ್ರಮುಖ ಬೆಳೆಯಾದ ತೊಗರಿ/ಬೇಳೆಕಾಳುಗಳನ್ನು ಕೇವಲ ಧಾನ್ಯವಾಗಿ ಮಾರಾಟ ಮಾಡದೆ, ಪ್ರೋಟೀನ್‌ಯುಕ್ತ ಸಂಸ್ಕರಿಸಿದ ಆಹಾರ ಮತ್ತು ಎನರ್ಜಿ ಬಾರ್‌ಗಳಂತಹ ಉನ್ನತ ಮೌಲ್ಯದ ಉತ್ಪನ್ನಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ.
ಕೃಷಿ ಕ್ಷೇತ್ರವನ್ನು ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಮಾರುಕಟ್ಟೆಗೆ ಜೋಡಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವುದು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಬಲವಾದ ಜೈವಿಕ ಆರ್ಥಿಕತೆಯನ್ನು ಕಟ್ಟುವುದು ಈ ಸುಧಾರಿತ ಯೋಜನೆಯ ಮುಖ್ಯ ಉದ್ದೇಶವಾಗಿದೆ.




