ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ '100 ಬ್ಲ್ಯಾಕ್ ಸ್ಪಾಟ್‌ಗಳ ಸ್ವಚ್ಛತಾ ಅಭಿಯಾನ' ಯಶಸ್ವಿಯಾಗಿ ಪೂರ್ಣಗೊಂಡಿದೆ. 45 ದಿನಗಳಲ್ಲಿ 100 ಕಸದ ಜಾಗಗಳನ್ನು ಸ್ವಚ್ಛಗೊಳಿಸುವ ಗುರಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮದ ಅಂಗವಾಗಿ, ತನಿಸಂದ್ರದಲ್ಲಿ ಹರಡಿಕೊಂಡಿದ್ದ 100ನೇ ಕಸದ ಜಾಗವನ್ನು ತೆರವುಗೊಳಿಸಿ ಸಂಪೂರ್ಣ ಸುಂದರ ಮತ್ತು ಕಸಮುಕ್ತ ರಸ್ತೆಯನ್ನಾಗಿ ಪರಿವರ್ತಿಸಲಾಗಿದೆ.
ಈ ವಿಶೇಷ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಕೃಷ್ಣ ಭೈರೇಗೌಡ ಅವರು ಭಾಗವಹಿಸಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ರಸ್ತೆಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯದೆ, ನಗರವನ್ನು ಸ್ವಚ್ಛವಾಗಿಡಲು ಸಹಕರಿಸಬೇಕೆಂದು ಜಾಗೃತಿ ಮೂಡಿಸಿದರು. ನಗರದ ಸೌಂದರ್ಯ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರವೂ ಪ್ರಮುಖವಾಗಿದೆ ಎಂದು ಅವರು ಕರೆ ನೀಡಿದರು.



