ಚಂದ್ರವಳ್ಳಿ ನ್ಯೂಸ್, ಪಾಲ್ಘರ್ (ಮಹಾರಾಷ್ಟ್ರ):
ಭವಿಷ್ಯದ ದೊಡ್ಡ ಫುಟ್‌ಬಾಲ್ ಆಟಗಾರ್ತಿಯಾಗಬೇಕೆಂಬ ಕನಸು ಹೊತ್ತು ತರಬೇತಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಖಾಸಗಿ ಫುಟ್‌ಬಾಲ್ ತರಬೇತುದಾರನೊಬ್ಬ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಎಸಗಿದ ಆಘಾತಕಾರಿ ಪ್ರಕರಣ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಆಟಗಾರ್ತಿಯ ಆಕ್ಷೇಪಾರ್ಹ ವಿಡಿಯೋಗಳನ್ನು ಚಿತ್ರೀಕರಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 36 ವರ್ಷದ ಕಾಮುಕ ಕೋಚ್ ಅಭಿಜಿತ್ ಮೆಂಡಲ್‌ನನ್ನು ವಸಾಯಿಯ ಮಾಣಿಕ್‌ಪುರ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ನಂಬಿಸಿ ವಂಚಿಸಿದ ಕಾಮುಕ ಕೋಚ್:
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, 2023 ರಲ್ಲಿ ವಸಾಯಿಯಲ್ಲಿರುವ ಅಭಿಜಿತ್ ಮೆಂಡಲ್‌ನ ಖಾಸಗಿ ಫುಟ್‌ಬಾಲ್ ತರಬೇತಿ ಅಕಾಡೆಮಿಗೆ 17 ವರ್ಷದ ಬಾಲಕಿ ಸೇರಿದ್ದಳು.
ಆರಂಭದಲ್ಲಿ ಬಾಲಕಿಯ ನಂಬಿಕೆಗಳಿಸಿದ ಕೋಚ್, ಫುಟ್‌ಬಾಲ್‌ನಲ್ಲಿ ದೊಡ್ಡ ದೊಡ್ಡ ಅವಕಾಶಗಳನ್ನು ಕೊಡಿಸುವುದಾಗಿ ಮತ್ತು ಉತ್ತಮ ಭವಿಷ್ಯ ರೂಪಿಸುವುದಾಗಿ ನಂಬಿಸಿದ್ದಾನೆ. ಇದನ್ನೇ ಬಂಡವಾಳ ಮಾಡಿಕೊಂಡು ಆಕೆಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ವಿಡಿಯೋ ತೋರಿಸಿ ಸೋಷಿಯಲ್ ಮೀಡಿಯಾ ಬೆದರಿಕೆ!:
ಕೋಚ್‌ನ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಬೇಸತ್ತ ಬಾಲಕಿ, ಆತನಿಂದ ದೂರವಿರಲು ಮತ್ತು ಸಂಪರ್ಕ ತಪ್ಪಿಸಲು ಪ್ರಯತ್ನಿಸಿದ್ದಾಳೆ. ಆದರೆ, ಅಷ್ಟರಲ್ಲಾಗಲೇ ಆಕೆಯ ಆಕ್ಷೇಪಾರ್ಹ ವಿಡಿಯೋ ಮತ್ತು ಫೋಟೋಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದ ಕೋಚ್ ಮೆಂಡಲ್, ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾನೆ. ತನ್ನ ಕಾಮದ ಬೇಡಿಕೆಗಳಿಗೆ ಒಪ್ಪದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಮನೆಯವರಿಗೆ ವಿಷಯ ತಿಳಿಸಿದ ಸಂತ್ರಸ್ತೆ:
ಕಳೆದ ಮೂರು ವರ್ಷಗಳಿಂದ ಆರೋಪಿಯ ನಿರಂತರ ಲೈಂಗಿಕ ಮತ್ತು ಮಾನಸಿಕ ಕಿರುಕುಳದಿಂದ ನೊಂದ ಬಾಲಕಿ, ಕೊನೆಗೂ ಧೈರ್ಯ ಮಾಡಿ ತನ್ನ ಕುಟುಂಬದವರ ಬಳಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾಳೆ. ಇದರಿಂದ ಆಘಾತಕ್ಕೊಳಗಾದ ಪೋಷಕರು ತಕ್ಷಣವೇ ಮಾಣಿಕ್‌ಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರನ್ನು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಪ್ರಾಥಮಿಕ ವಿಚಾರಣೆ ನಡೆಸಿ, ಕೃತ್ಯವೆಸಗಿದ ಫುಟ್‌ಬಾಲ್ ತರಬೇತುದಾರ ಅಭಿಜಿತ್ ಮೆಂಡಲ್‌ನನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



