ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಕ್ಷಿಣ ಕೊರಿಯಾ ಮೂಲದ ಜಾಗತಿಕ ಮುಂಚೂಣಿ ಯಂತ್ರೋಪಕರಣ ತಯಾರಿಕಾ ಸಂಸ್ಥೆ 'ಡಿಎನ್‌ಸಲ್ಯೂಷನ್ಸ್' ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಉತ್ಪಾದನಾ ಹಾಗೂ ಸಂಶೋಧನೆ-ಅಭಿವೃದ್ಧಿ ಕೇಂದ್ರವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಉದ್ಘಾಟಿಸಿದರು.
ಎರಡು ವರ್ಷಗಳ ಹಿಂದೆ (2024ರಲ್ಲಿ) ಕೊರಿಯಾ ಪ್ರವಾಸದ ವೇಳೆ ಮಾಡಿಕೊಳ್ಳಲಾಗಿದ್ದ ಒಪ್ಪಂದ ಇದೀಗ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದ್ದು, ಪ್ರಥಮ ಹಂತದಲ್ಲಿ ₹600 ಕೋಟಿ ಹೂಡಿಕೆಯಲ್ಲಿ ಈ ಘಟಕ ತಲೆಎತ್ತಿದೆ. "ಸರ್ಕಾರ ಹೂಡಿಕೆಗಳನ್ನು ಬರೀ ಕಾಗದದ ಒಪ್ಪಂದಕ್ಕೆ ಸೀಮಿತಗೊಳಿಸದೆ, ವಾಸ್ತವದಲ್ಲಿ ಅನುಷ್ಠಾನಗೊಳಿಸುತ್ತಿದೆ ಎಂಬುದಕ್ಕೆ ಈ ಯೋಜನೆಯೇ ಪ್ರತ್ಯಕ್ಷ ಸಾಕ್ಷಿ" ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.
ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಪ್ರಗತಿ:
ಪ್ರಸ್ತುತ ಈ ನೂತನ ಘಟಕದಲ್ಲಿ 240ಕ್ಕೂ ಹೆಚ್ಚು ಉದ್ಯೋಗಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸಂಖ್ಯೆ 400ರ ಗಡಿ ದಾಟಲಿದೆ.
ಭಾರತದ ಯಂತ್ರೋಪಕರಣ ಉದ್ಯಮದ ಒಟ್ಟು ಉತ್ಪಾದನೆಯಲ್ಲಿ ಶೇ.52ಕ್ಕೂ ಹೆಚ್ಚಿನ ಪಾಲು ಹೊಂದಿರುವ ಕರ್ನಾಟಕಕ್ಕೆ ಈ ಜಾಗತಿಕ ಸಂಸ್ಥೆಯ ಹೂಡಿಕೆಯು ತಾಂತ್ರಿಕವಾಗಿ ಹೊಸ ಶಕ್ತಿ ತಂದಿದೆ.
‘ಕರ್ನಾಟಕದಿಂದ ಜಗತ್ತಿಗೆ’ ಎಂಬ ಧ್ಯೇಯದೊಂದಿಗೆ ಸ್ಥಳೀಯ ಯುವ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಅವಕಾಶಗಳು ಲಭ್ಯವಾಗಲಿವೆ.




