ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತೀಯ ಬ್ರ್ಯಾಂಡ್‌ನ ಮೊಬೈಲ್ ಫೋನ್‌ಗಳ ಜಾಗತಿಕ ಉತ್ಪಾದನೆಗೆ ವೇಗ ನೀಡಲು ಮತ್ತು ತಾಂತ್ರಿಕ ಸಾರ್ವಭೌಮತ್ವ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ಮೊಬೈಲ್ ಫೋನ್ ಉತ್ಪಾದನೆಗೆ ಸಂಬಂಧಿಸಿದ ನೂತನ ಪ್ರೋತ್ಸಾಹಧನ ಆಧಾರಿತ (PLI 2.0) ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಬರೋಬ್ಬರಿ 62,500 ಕೋಟಿ ರೂಪಾಯಿಗಳ ಅನುಮೋದನೆ ನೀಡಿದೆ.
ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಐಟಿ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್, "ಈ ನೂತನ ಯೋಜನೆಯಿಂದ ಮುಂದಿನ ದಿನಗಳಲ್ಲಿ ಸುಮಾರು 15 ಲಕ್ಷ ಕೋಟಿ ರೂಪಾಯಿ ಮೌಲ್ಯದ ರಫ್ತು ವಹಿವಾಟು ನಡೆಯಲಿದ್ದು, ಕನಿಷ್ಠ 60,000 ಹೊಸ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ," ಎಂದು ತಿಳಿಸಿದರು.
5 ವರ್ಷಗಳ ಅವಧಿಗೆ ಅನುಷ್ಠಾನ:
ಮೊಬೈಲ್ ಪಿಎಲ್‌ಐ 2.0 ಯೋಜನೆಯು 2026-27ನೇ ಹಣಕಾಸು ವರ್ಷದಿಂದ ಆರಂಭಗೊಂಡು 2030-31ರ ಆರ್ಥಿಕ ವರ್ಷದವರೆಗೆ ಒಟ್ಟು ಐದು ವರ್ಷಗಳ ಅವಧಿಗೆ ಜಾರಿಯಲ್ಲಿರಲಿದೆ. ಭಾರತದ್ದೇ ಆದ ಸ್ವಂತ ಮೊಬೈಲ್ ಫೋನ್ ಬ್ರ್ಯಾಂಡ್‌ಗಳನ್ನು ಜಾಗತಿಕ ಮಟ್ಟದಲ್ಲಿ ರೂಪಿಸಲು ಈ ಬಾರಿ ಪ್ರತ್ಯೇಕ ಕಾರ್ಯತಂತ್ರ ಒಳಗೊಂಡ ವಿಶೇಷ ಯೋಜನೆ ಇರಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ವಿಶ್ವದ 2ನೇ ಅತಿದೊಡ್ಡ ಮೊಬೈಲ್ ಉತ್ಪಾದಕ ಭಾರತ:
ಕೇಂದ್ರ ಸರ್ಕಾರ ಈ ಹಿಂದೆ ನೀಡಿದ ಉತ್ತೇಜನಗಳ ಪರಿಣಾಮವಾಗಿ ಭಾರತವು ಸದ್ಯ ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನಾ ರಾಷ್ಟ್ರವಾಗಿ ಹೊರಹೊಮ್ಮಿದೆ. ಪ್ರಸ್ತುತ ದೇಶದ ರಫ್ತು ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳು ಅಗ್ರಸ್ಥಾನ ಕಾಯ್ದುಕೊಂಡಿದ್ದು, ಸಾಂಪ್ರದಾಯಿಕ ರಫ್ತು ಸರಕುಗಳಾದ ಡೀಸೆಲ್ ಇಂಧನ ಹಾಗೂ ಕತ್ತರಿಸಿದ ವಜ್ರಗಳನ್ನೂ ಮೀರಿಸಿ ಮುನ್ನಡೆದಿವೆ. ದೇಶದಿಂದ ಈಗಾಗಲೇ 2.62 ಲಕ್ಷ ಕೋಟಿ ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗುತ್ತಿದ್ದು, ಆ್ಯಪಲ್ ಕಂಪನಿಯು ಉತ್ಪಾದನಾ ವಿಭಾಗದಲ್ಲಿ ಸಿಂಹಪಾಲು ಹೊಂದಿದೆ.
PLI 2.0 ಮೂಲಕ ಸಾಧಿಸಲಿರುವ ಪ್ರಮುಖ ಗುರಿಗಳು:
ಮೊದಲ ಹಂತದ ಪಿಎಲ್‌ಐ ಯೋಜನೆಯ ಅವಧಿಯು 2026ರ ಮಾರ್ಚ್ 31ಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಈ ಎರಡನೇ ಹಂತದ ಯೋಜನೆ ತರಲಾಗಿದೆ. ಯೋಜನೆಯ ಐದು ವರ್ಷಗಳ ಅವಧಿಯಲ್ಲಿ ದೇಶದ ಒಟ್ಟು ಮೊಬೈಲ್ ಫೋನ್ ಉತ್ಪಾದನಾ ಮೌಲ್ಯ 39 ಲಕ್ಷ ಕೋಟಿಗೆ ತಲುಪುವ ನಿರೀಕ್ಷೆಯಿದೆ.
ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ದೇಶವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಪ್ರಮುಖ ಕೇಂದ್ರವನ್ನಾಗಿ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.
ಹೀಗಿದೆ ಪ್ರೋತ್ಸಾಹ ಧನದ ವಿವರ:
ದೇಶೀಯವಾಗಿ ಮೊಬೈಲ್ ತಯಾರಿಕೆಯನ್ನು ಉತ್ತೇಜಿಸಲು ಮಾರಾಟದ ಆಧಾರದ ಮೇಲೆ ಶೇ. 2.25 ರಿಂದ ಶೇ. 5 ರಷ್ಟು ಪ್ರೋತ್ಸಾಹಕ ಧನವನ್ನು ನೀಡಲಾಗುತ್ತದೆ. ಇದರೊಂದಿಗೆ ಪ್ರಮುಖ ಘಟಕಗಳನ್ನು ಭಾರತದಲ್ಲೇ ಖರೀದಿಸುವುದಕ್ಕೆ (ದೇಶೀಯ ಸೋರ್ಸಿಂಗ್) ಸಂಬಂಧಿಸಿದಂತೆ ಹೆಚ್ಚುವರಿ ಶೇ. 1.5 ರಷ್ಟು ಇನ್ಸೆಂಟಿವ್ ಸಿಗಲಿದೆ. ಪ್ರಮುಖವಾಗಿ, ಭಾರತೀಯ ಬ್ರ್ಯಾಂಡ್‌ಗಳನ್ನು ಜಾಗತಿಕವಾಗಿ ಬಿಲ್ಡ್ ಮಾಡಲು, ಹೊಸ ಉತ್ಪನ್ನದ ವಿನ್ಯಾಸ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ನಡೆಸಲು ಅರ್ಹ ಮಾರಾಟದ ಮೇಲೆ ಶೇ. 3 ರಷ್ಟು ಹೆಚ್ಚುವರಿ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ.



