ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯ ಜವಾಬ್ದಾರಿ ಕುರಿತಾದ ಗೊಂದಲಗಳು ಈಗ ಬಹಿರಂಗವಾಗತೊಡಗಿವೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದರೆ, ಇತ್ತ ಸಚಿವ ಈಶ್ವರ್ ಖಂಡ್ರೆ "ನಾವೆಲ್ಲಾ ಸೇವೆ ಮಾಡಲು ಬಂದವರು" ಎನ್ನುವ ಮೂಲಕ ಸಮಾಧಾನದ ಉತ್ತರ ನೀಡಿದ್ದಾರೆ.
ಹೊಣೆಗಾರಿಕೆ ಇದ್ದರೆ ಮಾತ್ರ ಉತ್ತಮ ಫಲಿತಾಂಶ: ಕೃಷ್ಣ ಬೈರೇಗೌಡ
ಬೆಂಗಳೂರು ನಗರಾಭಿವೃದ್ಧಿ ಖಾತೆಯ ಹಂಚಿಕೆ ಕುರಿತು ಕೇಳಲಾದ ಪ್ರಶ್ನೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಕೆಲಸ ಮಾಡಲು ಅಧಿಕಾರ ಮತ್ತು ಜವಾಬ್ದಾರಿಯಲ್ಲಿ ಸ್ಪಷ್ಟತೆ ಇರಬೇಕು ಎಂದು ಪ್ರತಿಪಾದಿಸಿದರು.
"ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಆದರೆ ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ಅತ್ಯಂತ ಕಠಿಣ ಹಾಗೂ ಸವಾಲಿನ ಜವಾಬ್ದಾರಿ ನೀಡಿದ್ದಾರೆ. ಬೆಂಗಳೂರು ಜನರ ಮತ್ತು ಪಕ್ಷದ ನಿರೀಕ್ಷೆಗಳು ದೊಡ್ಡದಾಗಿವೆ. ಇಂತಹ ಸಂದರ್ಭದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವಾಗ ಸ್ಪಷ್ಟತೆ ಇರಬೇಕು. ಅಧಿಕಾರ ಪಡೆದ ಮೇಲೆ ಹೊಣೆಗಾರಿಕೆ ಇರಬೇಕು ಮತ್ತು ಅದು ಫಲಿತಾಂಶದ ರೂಪದಲ್ಲಿ ಕಾಣಿಸಬೇಕು. ಜವಾಬ್ದಾರಿ ಮತ್ತು ಹಂಚಿಕೆಯ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದ್ದರೆ ಮಾತ್ರ ಉತ್ತಮ ಫಲಿತಾಂಶ ನೀಡಲು ಸಾಧ್ಯ. ಈ ಬಗ್ಗೆ ಸಿಎಂ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಇನ್ನೆರಡು ದಿನಗಳಲ್ಲಿ ಇತ್ಯರ್ಥ ಮಾಡುವುದಾಗಿ ಭರವಸೆ ನೀಡಿದ್ದಾರೆ" ಎಂದರು.
ಮೌನಕ್ಕೆ ಶರಣಾದ ಸಚಿವರು:
"ಹಾಗಾದರೆ ಗೊಂದಲ ಸರಿಪಡಿಸುವವರೆಗೂ ನೀವು ಖಾತೆಯ ಜವಾಬ್ದಾರಿ ವಹಿಸಿಕೊಳ್ಳುವುದಿಲ್ಲವೇ?" ಎಂದು ಮಾಧ್ಯಮದವರು ಕೇಳಿದ ನೇರ ಪ್ರಶ್ನೆಗೆ ಉತ್ತರಿಸದ ಸಚಿವ ಕೃಷ್ಣ ಬೈರೇಗೌಡ ಅವರು ಅಲ್ಲಿಂದ ಹೊರಟುಹೋದರು.
ನಾವೆಲ್ಲಾ ಸೇವೆ ಮಾಡಲು ಬಂದವರು: ಈಶ್ವರ್ ಖಂಡ್ರೆ ಸಮರ್ಥನೆ
ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಖಾತೆ ಅಸಮಾಧಾನದ ವರದಿಗಳನ್ನು ತಳ್ಳಿಹಾಕಿದರು. "ಈಗಾಗಲೇ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿಯವರು ಅಧಿಕಾರ ವಹಿಸಿಕೊಂಡು ಪ್ರಗತಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ಸಚಿವರೂ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ" ಎಂದರು.
ಖಾತೆ ಹಂಚಿಕೆ ಬಗ್ಗೆ ತಮಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ನಾವೆಲ್ಲಾ ಜನಸೇವೆ ಮಾಡಲು ಬಂದವರು. ಆ ಖಾತೆ, ಈ ಖಾತೆ ಎಂಬ ಭೇದವಿಲ್ಲ. ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಬದ್ಧತೆ ನಮಗಿದೆ. ಹಿಂದೆ ಅರಣ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ ತೃಪ್ತಿ ನನಗಿದೆ, ಈಗ ಸಿಕ್ಕಿರುವ ಖಾತೆಯನ್ನೂ ಅಷ್ಟೇ ಜವಾಬ್ದಾರಿಯಿಂದ ನಿಭಾಯಿಸುತ್ತೇನೆ" ಎಂದು ತಿಳಿಸಿದರು.
ಕೇಂದ್ರದ ವಿರುದ್ಧ ರಸಗೊಬ್ಬರ ಕೊರತೆ ಆರೋಪ:
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಈಶ್ವರ್ ಖಂಡ್ರೆ, "ರಾಜ್ಯಕ್ಕೆ ಕೇಂದ್ರ ಸರ್ಕಾರ ಕೇವಲ ಶೇ. 30ರಷ್ಟು ಮಾತ್ರ ರಸಗೊಬ್ಬರ ಪೂರೈಕೆ ಮಾಡಿದೆ. ರಾಜ್ಯಗಳಿಗೆ ಅಗತ್ಯವಿರುವಷ್ಟು ರಸಗೊಬ್ಬರ ಕೊಡುವುದು ಕೇಂದ್ರದ ಜವಾಬ್ದಾರಿ. ಸದ್ಯ ರಾಜ್ಯದಲ್ಲಿ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಾಗುವುದು" ಎಂದರು.
ಅಲ್ಲದೆ, ಸರ್ಕಾರದಲ್ಲಿ ಯಾವುದೇ ಆತಂಕವಿಲ್ಲ, ಎಸ್‌ಐಆರ್ ಸೇರಿದಂತೆ ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಸಿಎಲ್‌ಪಿ ಸಭೆ ಕರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.



