ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ರಾಜ್ಯ ಸರ್ಕಾರವು ಖಾರಿಫ್ 2026ರ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಕೆ.ಸಿ.ಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಸ್ಯಾಚುರೇಶನ್ ಅಭಿಯಾನ’ದ ಭಾಗವಾಗಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವಿಶೇಷ ಜಾಗೃತಿ ಹಾಗೂ ಸಾಲ ಸೌಲಭ್ಯ ಶಿಬಿರ ನಡೆಯಿತು.
ಕೆ.ಸಿ.ಸಿ ಸ್ಯಾಚುರೇಷನ್ ಅಭಿಯಾನವು ಈಗಾಗಲೇ ಜುಲೈ 6 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 14ರವರೆಗೆ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಬೆಳೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಕ್ಷೇತ್ರಗಳನ್ನು ಒಳಗೊಂಡಂತೆ ಅಭಿಯಾನ ನಡೆಯುತ್ತಿದೆ. ಎಸ್.ಎಲ್.ಬಿ.ಸಿ ಕರ್ನಾಟಕದ ನೇತೃತ್ವದಲ್ಲಿ ವಿವಿಧ ಸದಸ್ಯ ಬ್ಯಾಂಕ್‍ಗಳು ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದರ ಭಾಗವಾಗಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಪ್ರಬಂಧಕ ಎಂ.ಪಿ.ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಈಚೆಗೆ ಜಿಲ್ಲೆಯ ಬುರುಜನರೊಪ್ಪ, ಮರಡಿಹಳ್ಳಿ ಹಾಗೂ ಮದಕರಿಪುರ ಗ್ರಾಮಗಳಲ್ಲಿ ಶಿಬಿರಗಳನ್ನು ನಡೆಸಲಾಯಿತು.
ಈ ಶಿಬಿರದಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಯಶವಂತ್, ಕೃಷಿ ಇಲಾಖೆಯ ಅಶೋಕ್, ನಬಾರ್ಡ್ ಪ್ರತಿನಿಧಿ ವಿನಂತ್ ಹಾಗೂ ಎಸ್.ಬಿ.ಐ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್‍ನ ಅಧಿಕಾರಿಗಳು ಭಾಗವಹಿಸಿ ರೈತರಿಗೆ ಕೆ.ಸಿ.ಸಿ ಸಾಲ ಸೌಲಭ್ಯ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ವಿವಿಧ ಸರ್ಕಾರಿ ಯೋಜನೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಪ್ರಸ್ತುತ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೈತರಿಗೆ ನೆರವಾಗಲು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮೆ ಕುರಿತು ಅರಿವು ಮೂಡಿಸಲಾಯಿತು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಮಾಡಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದರು.



