ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಮುಖ್ಯ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಹೊಸ ವೇಗ ನೀಡುವ ಸಂಕಲ್ಪದೊಂದಿಗೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿರುವ ಅವರು, ಸಂಪುಟ ಸಭೆಯಲ್ಲಿ ಕೈಗೊಂಡಿರುವ ಪ್ರಮುಖ ತೀರ್ಮಾನಗಳ ವಿವರಗಳನ್ನು ಹಂಚಿಕೊಂಡಿದ್ದಾರೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಧಾರಗಳು:
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನಾಡಿನ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್ ಯೋಜನೆಯನ್ನು ಘೋಷಿಸಲಾಗಿದೆ.
ಉದ್ಯೋಗ ಸೃಷ್ಟಿ ಮತ್ತು 'ಯುವ ಉದ್ಯೋಗ ಸೇತು': ರಾಜ್ಯದಲ್ಲಿ ಖಾಲಿ ಇರುವ 56,000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲಾಗುವುದು ಹಾಗೂ ನಮ್ಮ ಯುವಕರನ್ನು ಜಾಗತಿಕ ಮಟ್ಟದ ಉದ್ಯೋಗ ಮಾರುಕಟ್ಟೆಗೆ ಸಜ್ಜುಗೊಳಿಸಲು 'ಯುವ ಉದ್ಯೋಗ ಸೇತು' ಎಂಬ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
'ಭಾರತ ಜೋಡೋ ಯುವಕ ಸಂಘ'ಗಳ ಸ್ಥಾಪನೆ: ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಬಲೀಕರಣಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್‌ಗಳಲ್ಲಿ ಒಟ್ಟು 10 ಸಾವಿರ 'ಭಾರತ ಜೋಡೋ ಯುವಕ ಸಂಘ'ಗಳನ್ನು ರಚಿಸಲಾಗುವುದು. ಈ ಪ್ರತಿಯೊಂದು ಸಂಘಕ್ಕೂ ತಲಾ 10 ಲಕ್ಷ ರೂ. ಅನುದಾನ ನೀಡಲಾಗುವುದು.
ಬೆಂಗಳೂರು ವಾಸಿಗಳಿಗೆ ಒಸಿ-ಸಿಸಿ ವಿನಾಯಿತಿ: ಬೆಂಗಳೂರಿನ ವಸತಿ ಕಟ್ಟಡಗಳ ಮಾಲೀಕರಿಗೆ ದೊಡ್ಡ ರಿಲೀಫ್ ನೀಡಲಾಗಿದ್ದು, ಒಸಿ-ಸಿಸಿ ನಿಯಮದಿಂದ ಒಂದು ಬಾರಿಗೆ ಅನ್ವಯವಾಗುವಂತೆ ರಾಜ್ಯದ ಎಲ್ಲ ಭಾಗಗಳಿಗೂ ವಿನಾಯಿತಿ ಘೋಷಿಸಲಾಗಿದೆ.
'ಬಿ' ಖಾತೆ ಜಮೀನುಗಳು 'ಎ' ಖಾತೆಗೆ ಪರಿವರ್ತನೆ: ರಾಜ್ಯಾದ್ಯಂತ ಇರುವ 'ಬಿ' ಖಾತೆ ಆಸ್ತಿಗಳನ್ನು 'ಎ' ಖಾತೆಯಾಗಿ ಪರಿವರ್ತಿಸಲು ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.
ಬೆಂಗಳೂರು ರಸ್ತೆಗಳ ಸುಧಾರಣೆ: ರಾಜಧಾನಿ ಬೆಂಗಳೂರಿನ ರಸ್ತೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ಗುಂಡಿ ಮುಕ್ತಗೊಳಿಸಲು 2,000 ಕೋಟಿ ರೂ. ವಿಶೇಷ ಅನುದಾನವನ್ನು ಮಂಜೂರು ಮಾಡಲಾಗಿದೆ.
"ಜನರಿಗೆ ಕೊಟ್ಟ ಮಾತಿನಂತೆ ಸಾರ್ವತ್ರಿಕ ಪ್ರಗತಿ ಹಾಗೂ ಯುವ ಸಬಲೀಕರಣಕ್ಕೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಿದೆ. ಈ ಎಲ್ಲಾ ನಿರ್ಧಾರಗಳು ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಲಿವೆ."
ಡಿ.ಕೆ. ಶಿವಕುಮಾರ್.



