Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶ್ರೀಮತಿ ಚೆನ್ನಮ್ಮ: ಮೌನದೊಳಗೆ ಬೆಳಗಿದ ಮಾತೃತ್ವದ ಮಹಾದೀಪ.

ಚಂದ್ರವಳ್ಳಿ ನ್ಯೂಸ್ ಮೈಸೂರು.               ಶ್ರೀಮತಿ ಚೆನ್ನಮ್ಮ: ಮೌನದೊಳಗೆ ಬೆಳಗಿದ ಮಾತೃತ್ವದ ಮಹಾದೀಪ.

(ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್. ಡಿ. ದೇವೇಗೌಡ ಅವರ ಧರ್ಮಪತ್ನಿಯ ಸ್ಮರಣೆ)

Advertisement

ಕೆಲವು ಬದುಕುಗಳು ಕಾಲದ ಪುಟಗಳಲ್ಲಿ ಕೇವಲ ಒಂದು ಹೆಸರಾಗಿ ಉಳಿಯುವುದಿಲ್ಲ. ಅವು ಮನುಷ್ಯನ ಮನಸ್ಸಿನಲ್ಲಿ ಒಂದು ಅನುಭವವಾಗಿ, ಒಂದು ನೆನಪಾಗಿ, ಒಂದು ಮೌಲ್ಯವಾಗಿ ಉಳಿಯುತ್ತವೆ. ಅಂತಹ ಅಪರೂಪದ ಬದುಕು ಶ್ರೀಮತಿ ಚೆನ್ನಮ್ಮ ಅವರದು. ಅವರು ಅಧಿಕಾರದ ನೆರಳಿನಲ್ಲಿ ಕಾಣಿಸಿಕೊಂಡ ವ್ಯಕ್ತಿತ್ವವಲ್ಲ, ಪ್ರೀತಿ, ಸರಳತೆ ಮತ್ತು ಮಾನವೀಯತೆಯ ಬೆಳಕಿನಲ್ಲಿ ಗುರುತಿಸಿಕೊಂಡ ಮಾತೃಹೃದಯದ ಮಹಾತಾಯಿ.

ಶ್ರೀಮತಿ ಚೆನ್ನಮ್ಮ ಅವರು ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್. ಡಿ. ದೇವೇಗೌಡ ಅವರ ಧರ್ಮಪತ್ನಿ ಎಂಬುದು ಅವರ ಬದುಕಿನ ಒಂದು ಪರಿಚಯ ಮಾತ್ರ. ಆದರೆ ಅವರ ವ್ಯಕ್ತಿತ್ವದ ಆಳವನ್ನು ಅರ್ಥಮಾಡಿಕೊಳ್ಳಲು ಆ ಒಂದು ಪರಿಚಯ ಸಾಕಾಗುವುದಿಲ್ಲ. ಅವರು ಒಂದು ಕುಟುಂಬದ ಆಧಾರಶಕ್ತಿ, ಅನೇಕ ಹೃದಯಗಳ ಆಶಾಕಿರಣ, ಸರಳ ಬದುಕಿನ ಮೂಲಕ ದೊಡ್ಡ ಸಂದೇಶ ನೀಡಿದ ಮಹಿಳೆ.

ಅಮ್ಮನ ನೆನಪು

ಮಮತೆಯ ನೆರಳಾದಿರಿ,
ಬದುಕಿನ ಬೆಳಕಾದಿರಿ.
ಕನಸಿಗೆ ರೆಕ್ಕೆ ನೀಡಿದಿರಿ,
ಮನಸಿಗೆ ಧೈರ್ಯ ತುಂಬಿದಿರಿ.
ನಿಮ್ಮ ಪ್ರೀತಿ ಮರೆಯದು ಅಮ್ಮ,
ಚೆನ್ನಮ್ಮ ಹೆಸರು ಅಮರ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಮುತ್ತಿಗೆಹೀರೆಹಳ್ಳಿ ಗ್ರಾಮದ ಮಣ್ಣಿನಲ್ಲಿ ಜನಿಸಿದ ಶ್ರೀಮತಿ ಚೆನ್ನಮ್ಮ ಅವರು ಗ್ರಾಮೀಣ ಬದುಕಿನ ಸರಳತೆ ಮತ್ತು ಸಂಸ್ಕಾರವನ್ನು ತಮ್ಮ ವ್ಯಕ್ತಿತ್ವದ ಭಾಗವನ್ನಾಗಿ ಮಾಡಿಕೊಂಡರು. ಹಳೆಕೋಟೆಯಲ್ಲಿ ವಿದ್ಯಾಭ್ಯಾಸ ಪಡೆದ ಅವರು, ಜೀವನದ ಅನುಭವವನ್ನೇ ತಮ್ಮ ದೊಡ್ಡ ಶಿಕ್ಷಣವನ್ನಾಗಿ ಸ್ವೀಕರಿಸಿದರು. ಪುಸ್ತಕದ ಜ್ಞಾನಕ್ಕಿಂತ ಬದುಕಿನ ಜ್ಞಾನವೇ ಮನುಷ್ಯನನ್ನು ಸಂಪೂರ್ಣಗೊಳಿಸುತ್ತದೆ ಎಂಬುದನ್ನು ಅವರು ತಮ್ಮ ನಡೆನುಡಿಗಳ ಮೂಲಕ ತೋರಿಸಿದರು.

೧೯೫೪ರ ಮೇ ೨೫ರಂದು ಶ್ರೀ ಹೆಚ್. ಡಿ. ದೇವೇಗೌಡ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶ್ರೀಮತಿ ಚೆನ್ನಮ್ಮ ಅವರು ಆರಂಭದ ದಿನಗಳಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರು. ಆದರೆ ಸಂಕಷ್ಟಗಳು ಅವರನ್ನು ಕುಗ್ಗಿಸಲಿಲ್ಲ. ಬದಲಾಗಿ ಅವು ಅವರ ಮನೋಬಲವನ್ನು ಮತ್ತಷ್ಟು ಗಟ್ಟಿಗೊಳಿಸಿದವು. ಸುಖದ ಸಮಯದಲ್ಲಿ ಜೊತೆಯಾಗಿರುವವರಿಗಿಂತ ಕಷ್ಟದ ಸಮಯದಲ್ಲಿ ಧೈರ್ಯ ತುಂಬುವ ಸಂಗಾತಿಯೇ ನಿಜವಾದ ಶಕ್ತಿ ಎಂಬುದನ್ನು ಅವರು ಸಾಬೀತುಪಡಿಸಿದರು.

ರಾಜಕೀಯದ ಹಾದಿ ಸುಲಭವಾದದ್ದಲ್ಲ. ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಯ ಹಿಂದೆ ಒಂದು ಕುಟುಂಬದ ತ್ಯಾಗ, ಸಹನೆ ಮತ್ತು ಮೌನ ಬೆಂಬಲ ಇರುತ್ತದೆ. ಶ್ರೀಮತಿ ಚೆನ್ನಮ್ಮ ಅವರು ಶ್ರೀ ದೇವೇಗೌಡರ ಜೀವನಯಾನದ ಹಿಂದೆ ಅಂತಹ ಮೌನ ಶಕ್ತಿಯಾಗಿ ನಿಂತರು. ಅವರು ಬೆಳಕಿಗೆ ಬರಲು ಬಯಸಲಿಲ್ಲ, ಆದರೆ ಅವರ ತ್ಯಾಗವೇ ಆ ಬೆಳಕಿನ ಮೂಲವಾಗಿತ್ತು.

ಕುಟುಂಬವನ್ನು ಕಟ್ಟುವುದು ಕೇವಲ ಜವಾಬ್ದಾರಿಯಲ್ಲ, ಅದು ಒಂದು ತಪಸ್ಸು. ಶ್ರೀಮತಿ ಚೆನ್ನಮ್ಮ ಅವರು ತಮ್ಮ ಮಕ್ಕಳಿಗೆ ಪ್ರೀತಿ, ಶಿಸ್ತು ಮತ್ತು ಸಂಸ್ಕಾರದ ಮೌಲ್ಯಗಳನ್ನು ನೀಡಿದರು. ಕುಟುಂಬದ ಪ್ರತಿಯೊಬ್ಬರ ಬದುಕಿನಲ್ಲೂ ಅವರು ಮಾರ್ಗದರ್ಶಕ ಶಕ್ತಿಯಾಗಿದ್ದರು. ಅವರ ಬದುಕು ಹೇಳಿಕೊಟ್ಟ ಪಾಠವೆಂದರೆ ಉತ್ತಮ ಸಂಸ್ಕಾರವೇ ಒಂದು ಕುಟುಂಬದ ನಿಜವಾದ ಸಂಪತ್ತು.

ಶ್ರೀಮತಿ ಚೆನ್ನಮ್ಮ ಅವರ ವಿಶೇಷತೆ ಎಂದರೆ ಅಧಿಕಾರದ ಹತ್ತಿರ ಇದ್ದರೂ ಸಾಮಾನ್ಯರ ಮನಸ್ಸಿನಿಂದ ದೂರವಾಗಲಿಲ್ಲ. ದೊಡ್ಡ ಸ್ಥಾನದಲ್ಲಿದ್ದ ಕುಟುಂಬದ ಸದಸ್ಯೆಯಾಗಿದ್ದರೂ, ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಸರಳ ಉಡುಗೆ, ಸರಳ ಮಾತು ಮತ್ತು ಆತ್ಮೀಯ ನಡೆ ಅವರ ಗುರುತಾಗಿತ್ತು.

ಅಮ್ಮನವರು ನನ್ನ ಬದುಕಿನಲ್ಲಿಯೂ ಶ್ರೀಮತಿ ಚೆನ್ನಮ್ಮ ಅವರ ಸ್ಥಾನ ಅತ್ಯಂತ ಅಮೂಲ್ಯವಾದುದು. ನನ್ನ ಓದು ಒಂದು ಹಂತದಲ್ಲಿ ನಿಂತುಹೋಗಿದ್ದ ಸಂದರ್ಭದಲ್ಲಿ, ಅವರ ಮಾತುಗಳು ನನ್ನ ಬದುಕಿಗೆ ಹೊಸ ದಿಕ್ಕು ನೀಡಿದವು. "ಮುಂದೆ ಓದಿ, ಜೀವನದಲ್ಲಿ ಬೆಳೆಯಬೇಕು" ಎಂಬ ಅವರ ಪ್ರೋತ್ಸಾಹದ ನುಡಿಗಳು ನನ್ನಲ್ಲಿ ಆತ್ಮವಿಶ್ವಾಸ ತುಂಬಿದವು. ಅವರು ನೀಡಿದ ಪ್ರೇರಣೆ ನನ್ನ ಬದುಕಿನ ತಿರುವಿನ ಕ್ಷಣವಾಯಿತು.

ಅವರು ನನಗೆ ಮಾತ್ರವಲ್ಲ, ನಮ್ಮ ಕುಟುಂಬಕ್ಕೂ ಅಪಾರವಾದ ಪ್ರೀತಿ ಮತ್ತು ಬೆಂಬಲ ನೀಡಿದರು. ಪರಿಚಯದ ಹಿರಿಯರಾಗಿ ಅಲ್ಲ, ಕುಟುಂಬದ ತಾಯಿಯಂತೆ ನಮ್ಮನ್ನು ಕಂಡರು. ಅಗತ್ಯದ ಸಮಯದಲ್ಲಿ ನೆರವಾದರು, ಕಷ್ಟದ ಸಮಯದಲ್ಲಿ ಧೈರ್ಯ ತುಂಬಿದರು. ಅವರ ಪ್ರೀತಿ ಮತ್ತು ಸಹಾಯ ನನ್ನ ಬದುಕಿನ ಶಾಶ್ವತ ನೆನಪು.

ಕೆಲವು ಉಪಕಾರಗಳಿಗೆ ಪ್ರತಿಫಲ ನೀಡಲು ಸಾಧ್ಯವಿಲ್ಲ. ಅವುಗಳನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದೇ ನಮ್ಮ ಕರ್ತವ್ಯ. ಶ್ರೀಮತಿ ಚೆನ್ನಮ್ಮ ಅವರಿಂದ ಪಡೆದ ಪ್ರೀತಿ, ಪ್ರೋತ್ಸಾಹ ಮತ್ತು ಬೆಂಬಲವೂ ಅಂತಹ ಅಮೂಲ್ಯ ಕೊಡುಗೆ.

ಅವರ ಹೃದಯದಲ್ಲಿ ಸೇವೆಯ ಭಾವನೆ ಸದಾ ಜೀವಂತವಾಗಿತ್ತು. ಅನ್ನದಾನ, ಸಹಾಯ, ಆತಿಥ್ಯ ಇವುಗಳು ಅವರ ಜೀವನದ ಸಹಜ ಗುಣಗಳಾಗಿದ್ದವು. ಬಲಹೀನರಿಗೆ ನೆರವಾಗುವುದು, ಅಗತ್ಯವಿರುವವರ ಕಣ್ಣೀರನ್ನು ಒರೆಸುವುದು ಅವರ ಮಾನವೀಯತೆಯ ಪ್ರತಿಬಿಂಬವಾಗಿತ್ತು.

ಅವರ ಬದುಕಿನಲ್ಲಿ ನೋವುಗಳೂ ಬಂದವು. ಆಸಿಡ್ ದಾಳಿಯಂತಹ ಅಮಾನವೀಯ ಘಟನೆಯ ನೋವನ್ನು ಅನುಭವಿಸಿದರೂ, ಅವರ ಹೃದಯದಲ್ಲಿ ಕ್ಷಮೆ ಮತ್ತು ಕರುಣೆ ಕಡಿಮೆಯಾಗಲಿಲ್ಲ. ನೋವನ್ನು ಮೀರಿ ಬದುಕುವ ಶಕ್ತಿ ಮತ್ತು ದ್ವೇಷವನ್ನು ಮೀರುವ ಹೃದಯ ಅವರ ಮಹತ್ವವನ್ನು ತೋರಿಸಿತು.

ಭಕ್ತಿ ಅವರ ಬದುಕಿನ ಆಧಾರವಾಗಿತ್ತು. ಆದರೆ ಅವರ ಭಕ್ತಿ ಕೇವಲ ದೇವರ ಆರಾಧನೆಗೆ ಸೀಮಿತವಾಗಿರಲಿಲ್ಲ. ಮನುಷ್ಯನ ಸೇವೆಯಲ್ಲಿಯೇ ದೇವರನ್ನು ಕಾಣುವ ವಿಶಾಲ ಮನಸ್ಸು ಅವರಲ್ಲಿತ್ತು.

ಇಂದು ಶ್ರೀಮತಿ ಚೆನ್ನಮ್ಮ ಅವರು ನಮ್ಮ ನಡುವೆ ಇಲ್ಲ. ಆದರೆ ಅವರು ಬಿಟ್ಟುಹೋದ ಮೌಲ್ಯಗಳು, ಅವರು ನೀಡಿದ ಪ್ರೀತಿ ಮತ್ತು ಅವರು ತೋರಿದ ಮಾನವೀಯ ದಾರಿ ಎಂದಿಗೂ ಅಳಿಯುವುದಿಲ್ಲ. ದೇಹದ ಅಗಲಿಕೆ ಒಂದು ಅಂತ್ಯವಲ್ಲ, ಮೌಲ್ಯಗಳ ಮೂಲಕ ಬದುಕುವುದು ನಿಜವಾದ ಅಮರತ್ವ.

ಶ್ರೀಮತಿ ಚೆನ್ನಮ್ಮ ಅವರು ಕೇವಲ ಶ್ರೀ ದೇವೇಗೌಡರ ಸಹಧರ್ಮಿಣಿ ಅಲ್ಲ, ಅವರು ಮಮತೆಯ ಮಾತೃಶಕ್ತಿ. ಅವರು ಒಂದು ಹೆಸರು ಅಲ್ಲ, ಒಂದು ಮೌಲ್ಯ. ಒಂದು ನೆನಪು ಅಲ್ಲ, ಒಂದು ಪ್ರೇರಣೆ. ಅವರ ಪವಿತ್ರ ಸ್ಮೃತಿಗೆ ಹೃದಯಪೂರ್ವಕ ನಮನಗಳು.               ಲೇಖನ:ಕಾಶಿಗೌ.
ಸಾಹಿತಿ, ನಿವೃತ್ತ ಪ್ರಾಂಶುಪಾಲರು,
 ಶಿವಶಕ್ತಿ ನಿಲಯ ಜೆಎಂಸಿ ಲೇಔಟ್ ,
ಮೈಸೂರು.

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಸಾಪ ಮಾಜಿ ಜಿಲ್ಲಾಧ್ಯಕ್ಷ, ಶಿಕ್ಷಣತಜ್ಞ ಡಾ. ಕೆ.ಎಂ. ವೀರೇಶ್ ಹೃದಯಾಘಾತದಿಂದ ನಿಧನದುರ್ಗಕ್ಕೆ ಹರಿದು ಬಂದ ಭದ್ರೆ- ಸೆ.24ರಂದು ಮುಖ್ಯಮಂತ್ರಿಗಳಿಂದ ಗಂಗಾಪೂಜೆ,  ಬೃಹತ್ ಸಾರ್ವಜನಿಕ ಸಮಾರಂಭಆರ್.ಎಲ್ ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ 22ನೇ ಘಟಿಕೋತ್ಸವ ಮತ್ತು ಪದವಿ ಪ್ರದಾನ ಕಾರ್ಯಕ್ರಮನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಹೋರಾಟಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾತಿನಿಧ್ಯ ಕಡಿಮೆ- ಚಿಕ್ಕಪ್ಪನಹಳ್ಳಿ ಷಣ್ಮುಖಕುಂಚಿಟಿಗ ನೌಕರರ ಸಂಘಕ್ಕೆ ಸದಸ್ಯರಾಗಿ: ಎಸ್.ಕೆ ಲಕ್ಷ್ಮಣ್ಚಳವಳಿ ನೆನಪಾಗಿ ಉಳಿದ ‘ತೆಂಕ-ಬಡಗ’ಅಂತಾರಾಷ್ಟ್ರೀಯ ಶಾಂತಿ ದಿನ – ಮನದ ದ್ವೇಷ ಕರಗಿದಾಗಲೇ ಜಗದ ಶಾಂತಿ ಅರಳುವುದು!ಗಣಪತಿ ಮೆರವಣಿಗೆ ವೇಳೆ ಗಲಾಟೆ 7 ಯುವಕರ ವಿರುದ್ಧ ಸುಮೋಟೋ ಪ್ರಕರಣ ದಾಖಲು