ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತೂಬಗೆರೆ ಹೋಬಳಿ ಶಿರವಾರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಕೃಷಿ ಮಹಾವಿದ್ಯಾಲಯ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಬೆಂಗಳೂರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಸಹಕಾರ ಹಾಲು ಒಕ್ಕೂಟ (BAMUL), ಕ್ರೆಡಿಟ್‌ಆಕ್ಸಿಸ್ ಇಂಡಿಯಾ ಫೌಂಡೇಶನ್ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಪಶು ಅರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕೃಷಿ ಮಹಾವಿದ್ಯಾಲಯ, GKVK, ಬೆಂಗಳೂರಿನ ಡೀನ್ (ಕೃಷಿ) ಡಾ. ವೈ.ಎನ್. ಶಿವಲಿಂಗಯ್ಯ ಅವರು ಭಾಗವಹಿಸಿ ಮಾತನಾಡಿ ರೈತರು ಜಾನುವಾರುಗಳ ಬಗ್ಗೆ ಸೂಕ್ಷ್ಮ ಸಂದರ್ಭಗಳಲ್ಲಿ ಅತೀವ ಕಾಳಜಿ ವಹಿಸಬೇಕು. ಅವುಗಳ ದಿನವಹಿ ಚಟುವಟಿಕೆಗಳ ಬಗ್ಗೆ ಸತತ ನಿಗಾ ವಹಿಸುವುದು ಉತ್ತಮ. ಸಮಯಕ್ಕೆ ಸರಿಯಾಗಿ ಉತ್ತಮ ಮೇವು ಹಾಗೂ ಚಿಕಿತ್ಸೆ ಕೊಡಿಸುವುದರಿಂದ ರೈತರಿಗೆ ಹೈನುಗಾರಿಕೆ ಹಾಗೂ ಕೃಷಿ ಕೆಲಸಕ್ಕೆ ಅನುಕೂಲ ವಾಗುತ್ತದೆ ಎಂದರು.
ಬಮುಲ್ ಸಹಾಯಕ ವ್ಯವಸ್ಥಾಪಕ ಡಾ. ಮೊಹಮದ್ ಜಿಯಾವುಲ್ಲಾ ಮಾತನಾಡಿ ಹೈನುಗಾರಿಕೆ ಹಾಗೂ ಕೃಷಿಗೆ ಜಾನುವಾರುಗಳು ಅತಿ ಮುಖ್ಯ. ರೈತರು ಜಾನುವಾರುಗಳ ಬಗ್ಗೆ ನಿಗಾ ವಹಿಸಬೇಕು. ಕಾಲ ಕಾಲಕ್ಕೆ ಸರಿಯಾಗಿ ಅವುಗಳ ಅರೋಗ್ಯ ತಪಾಸಣೆ ಮಾಡಿಸಬೇಕು. ಮುಖ್ಯವಾಗಿ ಪಶುಪಾಲನೆಯಲ್ಲಿ ವೈಜ್ಞಾನಿಕ ಕ್ರಮಗಳನ್ನು ರೈತರು ಅನುಸರಿಸುವುದು ಸೂಕ್ತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಪ್ರವೀಣ್ ಕುಮಾರ್, ತೂಬಗೆರೆ ಹೋಬಳಿ, ಮುಖ್ಯ ಪಶುವೈದ್ಯಾಧಿಕಾರಿ ಡಾ. ಕುಮಾರಸ್ವಾಮಿ ವೈ.ಆರ್., ಪಶು ಆಸ್ಪತ್ರೆ, ದೊಡ್ಡಬಳ್ಳಾಪುರ; ಪಶುವೈದ್ಯಕೀಯ ಪರಿವೀಕ್ಷಕರಾದ ಶ್ರೀ ಶಂಕರಪ್ಪಹಣಬೆ, ಜಗದೀಶ್ ವಿ.ಎನ್., ಪಶುವೈದ್ಯಕೀಯ ಪರಿವೀಕ್ಷಕರು,
ಡಾ. ಆನಂದ ಮಣೇಗಾರ ಜಿ., ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಪಶು ವಿಜ್ಞಾನ ವಿಭಾಗ, ಕೃಷಿ ಮಹಾವಿದ್ಯಾಲಯ, GKVK; ಡಾ. ಸವಿತಾ ಸಿ.ಎಂ., ಪ್ರಾಧ್ಯಾಪಕರು ಹಾಗೂ ಸಹ-ಸಂಯೋಜಕರು, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ; ಹಾಗೂ ಡಾ. ಬಿ.ಜಿ. ಹನುಮಂತರಾಯ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ, ದೊಡ್ಡಬಳ್ಳಾಪುರ ಅವರು ಉಪಸ್ಥಿತರಿದ್ದರು.
ಶಿರವಾರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸುರೇಶ್ ಹಾಗೂ ಕಾರ್ಯದರ್ಶಿ ರವಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗ್ರಾಮಸ್ಥರು ಮತ್ತು ರೈತರು ತಮ್ಮ ಜಾನುವಾರುಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು.
ಈ ಶಿಬಿರದ ಮೂಲಕ ರೈತರಿಗೆ ಜಾನುವಾರುಗಳ ಆರೋಗ್ಯ ತಪಾಸಣೆ, ಬಂಜೆತನ ಸಮಸ್ಯೆ ಗುರುತಿಸುವಿಕೆ, ಜಂತು ನಿವಾರಣೆ, ಆಹಾರ ನಿರ್ವಹಣೆ, ಗರ್ಭಧಾರಣೆ ಹಾಗೂ ಪಶುಪಾಲನೆಗೆ ಸಂಬಂಧಿಸಿದ ಅಗತ್ಯ ಸಲಹೆ ಮತ್ತು ಚಿಕಿತ್ಸಾ ಸೇವೆಗಳು ಒಂದೇ ವೇದಿಕೆಯಲ್ಲಿ ದೊರೆತವು. ಗ್ರಾಮೀಣ ಭಾಗದ ರೈತರಿಗೆ ನೇರವಾಗಿ ಪಶುವೈದ್ಯಕೀಯ ಸೇವೆ ತಲುಪಿಸುವಲ್ಲಿ ಶಿಬಿರವು ಮಹತ್ವದ ಪಾತ್ರ ವಹಿಸಿತು.



