ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬಯಲುಸೀಮೆಯ ಪಾಲಿಗೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ಅಸಾಧ್ಯವೆಂಬ ಕಾಲಘಟ್ಟದಲ್ಲಿ ಹೋರಾಟ ಸಮಿತಿ ರಚಿಸಿಕೊಂಡು, ಸರ್ಕಾರಕ್ಕೆ ನೀರಿನ ಲಭ್ಯತೆಯ ನೈಜ ಮಾಹಿತಿ ನೀಡಿ ಯೋಜನೆಯನ್ನು ಸಾಕಾರಗೊಳಿಸಿದ ಈ ಕ್ಷಣ ನಿಜಕ್ಕೂ ರೋಮಾಂಚನಕಾರಿ ಎಂದು ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಪಿ. ಕೋದಂಡರಾಮಯ್ಯ ಬಣ್ಣಿಸಿದರು.
ತಾಲೂಕಿನ ಗೋನೂರು ಬಳಿ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಯುವ ಸ್ಥಳದಲ್ಲಿ ಚಿತ್ರದುರ್ಗ ಜಿಲ್ಲಾ ನೀರಾವರಿ ಹೋರಾಟ ಸಮಿತಿಯು ಗುರುವಾರ ಆಯೋಜಿಸಿದ್ದ ಪೂಜಾ ಕಾರ್ಯಕ್ರಮ ಹಾಗೂ ‘ಸಮಗ್ರ ನೀರಾವರಿ ಯೋಜನೆ ಜಾರಿ-೨ನೇ ಹಂತದ ಹೋರಾಟ’ದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಯಲುಸೀಮೆಯ ಹಸಿರೀಕರಣಕ್ಕೆ ೨ನೇ ಹಂತದ ಚಳವಳಿ:
ರಾಜ್ಯದಲ್ಲೇ ಅತ್ಯಂತ ಬೃಹತ್ ಮೊತ್ತದ ಯೋಜನೆಯಾಗಿರುವ ಭದ್ರಾ ಮೇಲ್ದಂಡೆಯಿಂದ ಸುಮಾರು ೫ ಲಕ್ಷ ಎಕರೆ ಭೂಮಿಗೆ ನೀರುಣಿಸುವ ಕನಸು ನನಸಾಗುತ್ತಿದೆ. ಹಲವು ಅಡ್ಡಿ-ಆತಂಕಗಳ ನಡುವೆಯೂ ನೀರು ಹರಿಯುತ್ತಿರುವುದು ಸಂತಸದ ವಿಷಯ. ಆದರೆ, ಜಿಲ್ಲೆಯ ಹಲವು ಕೆರೆ-ಕಟ್ಟೆಗಳು ಹಾಗೂ ತಾಲೂಕುಗಳು ಇಂದಿಗೂ ಈ ಯೋಜನೆಯಿಂದ ವಂಚಿತವಾಗಿವೆ. ಹೀಗಾಗಿ ಬಿಟ್ಟುಹೋದ ಪ್ರದೇಶಗಳನ್ನು ಸೇರ್ಪಡೆಗೊಳಿಸಿ ಸಮಗ್ರ ನೀರಾವರಿ ಕಲ್ಪಿಸಲು ಮತ್ತೊಂದು ಹಂತದ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
"ನನ್ನ ಹುಟ್ಟು ಆಂಧ್ರಪ್ರದೇಶವಾದರೂ, ನನ್ನ ಕರ್ಮಭೂಮಿ ಕನ್ನಡನಾಡು. ಲೋಕಸಭೆಯಲ್ಲಿ ಈ ಯೋಜನೆಯ ಧ್ವನಿಯೆತ್ತಿದಾಗ ನನ್ನ ಮೂಲವನ್ನು ಪ್ರಸ್ತಾಪಿಸಿದವರಿಗೂ ಇದನ್ನೇ ಉತ್ತರಿಸಿದ್ದೆ" ಎಂದು ಕೋದಂಡರಾಮಯ್ಯ ಅವರು ತಮ್ಮ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆಗೆ ಸಕಾಲದಲ್ಲಿ ಅನುದಾನ ನೀಡಿ, ಪೂರ್ಣಪ್ರಮಾಣದಲ್ಲಿ ಕಾಮಗಾರಿ ಮುಗಿಸಬೇಕು ಎಂದು ಆಗ್ರಹಿಸಿದರು.
ಬಸವನಾಗಿದೇವ ಸ್ವಾಮೀಜಿ (ಛಲವಾದಿ ಮಠ): ಚಳವಳಿಯಲ್ಲಿ ಪಾಲ್ಗೊಂಡು ಸಾರ್ಥಕತೆ ಕಂಡವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಶ್ರೀಪೀಠದ ವತಿಯಿಂದ ಶೀಘ್ರವೇ ಎಲ್ಲಾ ಹೋರಾಟಗಾರರಿಗೆ ಗೌರವ ಸಮರ್ಪಣೆ ಮಾಡಲಾಗುವುದು.
ಬೇಡರರೆಡ್ಡಿಹಳ್ಳಿ ಬಸವರೆಡ್ಡಿ (ಸಮಿತಿ ಹಿರಿಯ ಮುಖಂಡ): ಸುದೀರ್ಘ ಹೋರಾಟದ ಫಲವಾಗಿ ನೀರು ಹರಿದಿದೆ. ಮೊಳಕಾಲ್ಮೂರು ಸೇರಿದಂತೆ ಬಿಟ್ಟುಹೋದ ತಾಲೂಕುಗಳ ಕೆರೆಗಳಿಗೆ ನೀರು ತಲುಪಿಸಲು ಮುಂದಿನ ಹಂತದ ಚಳವಳಿ ಅಗತ್ಯ.
ಎಸ್.ಕೆ. ಬಸವರಾಜನ್ (ಮಾಜಿ ಶಾಸಕ): ಹೋರಾಟಗಾರರು ಹಾಗೂ ಮಠಾಧೀಶರ ಅಚಲ ಬದ್ಧತೆಯಿಂದಾಗಿ ಯೋಜನೆ ಜಾರಿಯಾಗಿದೆ. ರೈತರು ತಮ್ಮ ಜಮೀನುಗಳನ್ನು ಗುತ್ತಿಗೆ ನೀಡುವ ಅಥವಾ ಮಾರಾಟ ಮಾಡುವ ಮನಸ್ಥಿತಿಯಿಂದ ಹೊರಬಂದು ಸ್ವಂತ ಉಳುಮೆಗೆ ಆದ್ಯತೆ ನೀಡಬೇಕು.
೧. ಹೋರಾಟಗಾರರ ಪಾದಗಳಿಗೆ ನಮನ:
ಬರಡು ನೆಲವನ್ನು ಹಸಿರುಗೊಳಿಸಲು ಶ್ರಮಿಸಿದ ಹೋರಾಟಗಾರರ ಪಾದಗಳಿಗೆ ನಮಿಸಬೇಕು ಎಂದು ಎಂಎಲ್‌ಸಿ ಕೆ.ಎಸ್. ನವೀನ್ ತಿಳಿಸಿದರು. ಕೇಂದ್ರ ಸರ್ಕಾರ ತನ್ನ ಭರವಸೆಯಂತೆ ೫,೩೦೦ ಕೋಟಿ ರೂ. ಬಿಡುಗಡೆಗೆ ಕ್ರಮವಹಿಸುತ್ತಿದ್ದು, ನೇರ ರೈಲ್ವೆ ಮಾರ್ಗ ಹಾಗೂ ನೀರಾವರಿ ಯೋಜನೆಗಳು ೨೦೨೮ರ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
೨. ಆರಂಭದಲ್ಲಿ ಬೀದಿಗಿಳಿಯದವರಿಗೆ ಈಗ ಜ್ಞಾನೋದಯ!
ಹೋರಾಟದ ಆರಂಭಿಕ ದಿನಗಳಲ್ಲಿ ಬೆಂಬಲ ನೀಡದವರು, ಈಗ ನೀರು ಹರಿಯುತ್ತಿದ್ದಂತೆ 'ನಮ್ಮೂರಿನ ಕೆರೆಗೆ ನೀರಿಲ್ಲ' ಎಂದು ಹೋರಾಟಕ್ಕೆ ಕರೆಯುತ್ತಿದ್ದಾರೆ. ಈ ಜ್ಞಾನೋದಯ ಆರಂಭದಲ್ಲೇ ಇದ್ದಿದ್ದರೆ ಸಮಗ್ರ ನೀರಾವರಿ ಕಲ್ಪನೆ ಎಂದೋ ಸಾಕಾರಗೊಳ್ಳುತ್ತಿತ್ತು ಎಂದು ಸಮಿತಿ ಮುಖಂಡ ಈಚಘಟ್ಟ ಸಿದ್ದವೀರಪ್ಪ ಮಾರ್ಮಿಕವಾಗಿ ನುಡಿದರು.
೩. ಕಾಲುವೆಗೆ ಹೋರಾಟಗಾರರ ಹೆಸರಿಡಲು ಒತ್ತಾಯ:
ನೀರಾವರಿ ಹೋರಾಟಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಪಿ. ಕೋದಂಡರಾಮಯ್ಯ, ಎಂ. ಜಯಣ್ಣ ಹಾಗೂ ಶ್ರೀ ಮುರುಘ ರಾಜೇಂದ್ರ ಒಡೆಯರ್ ಅವರ ಹೆಸರುಗಳನ್ನು ಈ ಯೋಜನೆ ಮತ್ತು ಕಾಲುವೆಗಳಿಗೆ ನಾಮಕರಣ ಮಾಡುವ ಮೂಲಕ ಸರ್ಕಾರ ಸೂಕ್ತ ಗೌರವ ಸಲ್ಲಿಸಬೇಕೆಂದು ಮುಖಂಡರಾದ ಬಸವರೆಡ್ಡಿ, ಎಸ್.ಕೆ. ಬಸವರಾಜನ್ ಮತ್ತು ಎಂ.ಡಿ. ರವಿ ಒತ್ತಾಯಿಸಿದರು.
"ನಮ್ಮ ಕಣ್ಣೆದುರೇ ನೀರು ಧುಮ್ಮುಕ್ಕುತ್ತಿರುವುದು ರೋಮಾಂಚನ ತಂದಿದೆ"
"ನಮ್ಮ ಪ್ರದೇಶಕ್ಕೆ ನೀರು ಬರುತ್ತದೆ ಎಂಬುದು ಕೇವಲ ಕನಸಾಗಿತ್ತು. ಆದರೆ ಇಂದು ನೀರು ಹರಿಯುತ್ತಿರುವುದನ್ನು ಕಣ್ಣಾರೆ ಕಾಣುವ ಭಾಗ್ಯ ನಮ್ಮದಾಗಿದೆ. ಈ ಸುಂದರ ಕ್ಷಣದಲ್ಲಿ ಹೋರಾಟಕ್ಕೆ ಕಾರಣರಾದ ಎಂ. ಜಯಣ್ಣ ಹಾಗೂ ಮುರುಘ ರಾಜೇಂದ್ರ ಒಡೆಯರ್ ಅವರಂತಹ ಚೇತನಗಳು ನಮ್ಮೊಂದಿಗಿರಬೇಕಿತ್ತು."
ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಕಬೀರಾನಂದ ಮಠ.




