ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನ ಯುಪಿಎಸ್‍ಸಿ ನಾಗರಿಕ ಸೇವಾ ಪರೀಕ್ಷಾ ಪೂರ್ವ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 03 ಅರ್ಜಿ ಸಲ್ಲಿಸಲು ಕೊನೆಯ ದಿನ.
ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗುಂಪಿಗೆ ಸೇರಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಉಚಿತ ಊಟ ಹಾಗೂ ವಸತಿಯೊಂದಿಗೆ ತರಬೇತಿ ನೀಡಲಾಗುವುದು.
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೂ ಒಂದು ಪದವಿ ಪಡೆದಿದ್ದು, ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 5 ಲಕ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಪ್ರವರ್ಗ ಹಾಗೂ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಉಚಿತ ಊಟ ಮತ್ತು ವಸತಿ ಸೌಲಭ್ಯ ಇರುವುದರಿಂದ ಪ್ರತ್ಯೇಕವಾಗಿ ಯಾವುದೇ ತರಬೇತಿ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ವೆಬ್‍ಸೈಟ್ https://bcwd.karnataka.gov.in ಅಥವಾ sevasindhuservices.karnataka.gov.in ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 8050770004 ಕ್ಕೆ ಕರೆ ಮಾಡಿ (ಬೆಳಗ್ಗೆ 10.00 ರಿಂದ ಸಂಜೆ 5.30 ರವರೆಗೆ, ರಜಾದಿನಗಳನ್ನು ಹೊರತುಪಡಿಸಿ) ಮಾಹಿತಿ ಪಡೆಯಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.



