ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಹಾಗೂ ವ್ಯಾಪಾರ, ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲಾಗಿರುವ ‘ಆಸ್ಟ್ರೇಲಿಯಾ ಕಾನ್ಸುಲೇಟ್ ಜನರಲ್’ ಕಚೇರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಅಧಿಕೃತವಾಗಿ ಉದ್ಘಾಟಿಸಿದರು.
ಆಸ್ಟ್ರೇಲಿಯಾ ಸರ್ಕಾರದ ಪೌರತ್ವ, ಸುಂಕ, ಬಹುಸಂಸ್ಕೃತಿ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ಶಿಕ್ಷಣ ಸಚಿವರಾದ ಜೂಲಿಯನ್ ಹಿಲ್ ಅವರೊಂದಿಗೆ ಸಚಿವರು ಈ ಮಹತ್ವದ ಕಚೇರಿಯನ್ನು ಶುಭಾರಂಭ ಮಾಡಿದರು.
ಹೂಡಿಕೆ ಮತ್ತು ಉನ್ನತ ಶಿಕ್ಷಣಕ್ಕೆ ನೂತನ ಮೈಲಿಗಲ್ಲು:
ಕಾರ್ಯಕ್ರಮದ ಬಳಿಕ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಈ ನೂತನ ರಾಜತಾಂತ್ರಿಕ ಕಚೇರಿಯು ಕರ್ನಾಟಕ ಹಾಗೂ ಆಸ್ಟ್ರೇಲಿಯಾ ನಡುವಿನ ಶೈಕ್ಷಣಿಕ ಮತ್ತು ವಾಣಿಜ್ಯ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲಿದೆ ಎಂದರು.
40ಕ್ಕೂ ಹೆಚ್ಚು ಆಸ್ಟ್ರೇಲಿಯನ್ ಕಂಪನಿಗಳು: ಕರ್ನಾಟಕದಲ್ಲಿ ಈಗಾಗಲೇ 40ಕ್ಕೂ ಹೆಚ್ಚು ಆಸ್ಟ್ರೇಲಿಯನ್ ಕಂಪನಿಗಳು ಕಾರ್ಯಾಚರಿಸುತ್ತಿದ್ದು, ಕ್ವೀನ್ಸ್‌ಲ್ಯಾಂಡ್ ಮತ್ತು ವಿಕ್ಟೋರಿಯಾ ರಾಜ್ಯಗಳ ವ್ಯಾಪಾರ ಕಚೇರಿಗಳೂ ಸಹ ಸಕ್ರಿಯವಾಗಿವೆ.
ಬೆಂಗಳೂರಿನಲ್ಲಿ ವಿದೇಶಿ ವಿಶ್ವವಿದ್ಯಾಲಯ ಕ್ಯಾಂಪಸ್: ಆಸ್ಟ್ರೇಲಿಯಾದ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ ತನ್ನ ಪ್ರಥಮ ಭಾರತೀಯ ಕ್ಯಾಂಪಸ್ ಅನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಇದು ಭಾರತದಲ್ಲೇ ಸ್ಥಾಪನೆಯಾಗುತ್ತಿರುವ ಮೊದಲ ವಿದೇಶಿ ವಿಶ್ವವಿದ್ಯಾಲಯ ಕ್ಯಾಂಪಸ್ ಆಗಿದ್ದು, ಜಾಗತಿಕ ತಂತ್ರಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯದ ಸ್ಥಾನಮಾನವನ್ನು ಮತ್ತಷ್ಟು ಎತ್ತರಕ್ಕೇರಿಸಲಿದೆ.
ಹೂಡಿಕೆಸ್ನೇಹಿ ವಾತಾವರಣಕ್ಕೆ ಕರ್ನಾಟಕ ಬದ್ಧ: ಸಚಿವ ಎಂ.ಬಿ. ಪಾಟೀಲ್
"ಭಾರತ-ಆಸ್ಟ್ರೇಲಿಯಾ ನಡುವಿನ ವ್ಯಾಪಾರ, ಶಿಕ್ಷಣ ಹಾಗೂ ಸಂಶೋಧನಾ ಸಹಭಾಗಿತ್ವವು ಕರ್ನಾಟಕದ ಮೇಲಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಹೂಡಿಕೆಸ್ನೇಹಿ ವಾತಾವರಣ, ಪಾರದರ್ಶಕ ಆಡಳಿತ ಮತ್ತು ಉದ್ಯಮಸ್ನೇಹಿ ನೀತಿಗಳ ಮೂಲಕ ಆಸ್ಟ್ರೇಲಿಯಾದ ಉದ್ಯಮಿಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ನೀಡಲು ಸರ್ಕಾರ ಬದ್ಧವಾಗಿದೆ."
ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದಲ್ಲಿನ ಆಸ್ಟ್ರೇಲಿಯಾ ಹೈಕಮಿಷನರ್ ಫಿಲಿಪ್ ಗ್ರೀನ್ ಹಾಗೂ ಬೆಂಗಳೂರಿನ ಆಸ್ಟ್ರೇಲಿಯನ್ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.



