ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಗೌರಿ-ಗಣೇಶ ಹಬ್ಬದ ಆಚರಣೆಗೆ ಜಿಲ್ಲೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿರುವ ಮಧ್ಯೆ, ಜಿಲ್ಲಾಡಳಿತವು ಗಣೇಶೋತ್ಸವದ ವೇಳೆ ಕರ್ಕಶ ಶಬ್ದ ಮಾಡುವ ಡಿಜೆ ಬಳಕೆಗೆ ನಿಷೇಧ ಹೇರಿದೆ. ಮಕ್ಕಳ, ವೃದ್ಧರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ ಡಿಜೆ ನಿಷೇಧಿಸಿರುವುದರಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ಬಂಡವಾಳ ಹೂಡಿರುವ ಡಿಜೆ ಹಾಗೂ ಶಾಮಿಯಾನ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡಿಜೆ ಮಾಲೀಕರ ಅಳಲು: ದಾವಣಗೆರೆ ಜಿಲ್ಲೆಯಲ್ಲಿ ಶಾಮಿಯಾನ ಮತ್ತು ಧ್ವನಿವರ್ಧಕಗಳ ಸುಮಾರು 450 ರಿಂದ 500 ಅಂಗಡಿಗಳಿದ್ದು, ಸಾವಿರಾರು ಕುಟುಂಬಗಳು ಈ ಉದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿವೆ. ಹೊಲ ಹಾಗೂ ಚಿನ್ನಾಭರಣಗಳನ್ನು ಮಾರಿ ಬಂಡವಾಳ ಹೂಡಲಾಗಿದ್ದು, ದಿಢೀರ್ ಡಿಜೆ ನಿಷೇಧ ಮಾಡಿರುವುದರಿಂದ ಮಾಲೀಕರು ಮತ್ತು ಕೆಲಸಗಾರರು ಬೀದಿಗೆ ಬೀಳುವಂತಾಗಿದೆ ಎಂದು ಶಾಮಿಯಾನ ಹಾಗೂ ಡಿಜೆ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಆರ್. ಲಕ್ಷ್ಮಣ್ ಅಳಲು ತೋಡಿಕೊಂಡಿದ್ದಾರೆ. ಹೊರ ಜಿಲ್ಲೆಗಳಿಂದ ಬರುವ ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ಸ್ಪಷ್ಟನೆ: ಡಿಜೆ ನಿಷೇಧ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ, ತುಮಕೂರು ಮತ್ತು ಶಿವಮೊಗ್ಗ ಜಿಲ್ಲೆಗಳಂತೆ ದಾವಣಗೆರೆಯಲ್ಲೂ ಡಿಜೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಡಿಜೆಯಿಂದ ಉಂಟಾಗುತ್ತಿರುವ ಕರ್ಕಶ ಶಬ್ದದಿಂದ ಹಿರಿಯರು ಮತ್ತು ರೋಗಿಗಳಿಗೆ ತೊಂದರೆಯಾಗುತ್ತಿದ್ದು, ಹಲವರು ದೂರು ನೀಡಿದ್ದಾರೆ.
ಸ್ಥಳೀಯ ಕಲಾತಂಡಗಳು ಮತ್ತು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಹಬ್ಬದ ಆಚರಣೆಗೆ ಕಲಾತಂಡಗಳು ಬೇಕಾದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಳುಹಿಸಿಕೊಡಲಾಗುವುದು.
ಸೌಂಡ್ ಸಿಸ್ಟಮ್‌ಗೆ ಎಷ್ಟು ಬಾಕ್ಸ್‌ಗಳನ್ನು ಬಳಸಬಹುದು ಎಂಬುದನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆ ಮತ್ತು ಎಸ್ಪಿ ಎಚ್ಚರಿಕೆ: ಶಾಂತಿಯುತವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸಲು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಎಸ್‌ಪಿ ಶೇಖರ್ ಹೆಚ್.ಟಿ. ತಿಳಿಸಿದ್ದಾರೆ.
ಗಡಿಪಾರು ಅಸ್ತ್ರ: ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ 17 ಜನರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈಗಾಗಲೇ 9 ಜನರನ್ನು ಗಡಿಪಾರು ಮಾಡಲಾಗಿದೆ.
ರೌಡಿಶೀಟರ್‌ಗಳ ಮೇಲೆ ನಿಗಮ: ಜಿಲ್ಲೆಯಲ್ಲಿ ಒಟ್ಟು 471 ರೌಡಿಶೀಟರ್‌ಗಳಿದ್ದು, ಇವರಲ್ಲಿ 105 ಜನ ಕೋಮು ಸೌಹಾರ್ದ ಕದಡುವವರಿದ್ದಾರೆ. ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ.
ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಪ್ರತಿ ಪೊಲೀಸ್ ಠಾಣೆಯಲ್ಲೂ 'ಸಾಮಾಜಿಕ ಜಾಲತಾಣ ನಿಗಾ ಘಟಕ' ಸ್ಥಾಪಿಸಲಾಗಿದ್ದು, ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಿದರೆ ಕಠಿಣ ಕ್ರಮ ಜರುಗಿಸಲಾಗುವುದು.
ಡ್ರೋಣ್ ಕ್ಯಾಮೆರಾ ಬಳಕೆ: ಗಣೇಶ ವಿಸರ್ಜನೆ ಹಾಗೂ ಮೆರವಣಿಗೆಯ ಮೇಲೆ ನಿಗಾ ಇಡಲು 1.5 ಕಿ.ಮೀ. ವ್ಯಾಪ್ತಿಯಲ್ಲಿ ದೃಶ್ಯ ಸೆರೆಹಿಡಿಯುವ 4 ಡ್ರೋಣ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಹದ್ದು ಮೀರಿದ ವರ್ತನೆ ಮಾಡಿದರೆ ಕಾನೂನು ತನ್ನ ಕೆಲಸ ಮಾಡಲಿದೆ ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ.




