ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ದಲಿತರು, ರೈತರು ಹಾಗೂ ಶೋಷಿತರ ನ್ಯಾಯಕ್ಕಾಗಿ ಬಿಜೆಪಿ ನಾಯಕ ಸಿ.ಟಿ. ರವಿ ನೇತೃತ್ವದಲ್ಲಿ ನಡೆಯುತ್ತಿರುವ 'ಬಳ್ಳಾರಿ ಚಲೋ' ಜನಾಕ್ರೋಶ ಪಾದಯಾತ್ರೆ 9ನೇ ದಿನಕ್ಕೆ ಕಾಲಿಟ್ಟಿದೆ.
ಕುಡುತಿನಿಯ ಶ್ರೀ ದೊಡ್ಡ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ 9ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಪಾದಯಾತ್ರೆಯುದ್ದಕ್ಕೂ ಸ್ಥಳೀಯರಿಂದ ಅಭೂತಪೂರ್ವ ಬೆಂಬಲ, ಹಿರಿಯರ ಆಶೀರ್ವಾದ ಹಾಗೂ ಯುವಜನರ ಉತ್ಸಾಹ ಕಂಡುಬಂದಿದೆ.
ಸರ್ಕಾರದ ವಿರುದ್ಧ ಕಿಡಿ: ದಲಿತರು ಹಾಗೂ ರೈತರ ಹಕ್ಕುಗಳನ್ನು ಕಸಿದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಸಾಮಾನ್ಯರಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಈ ಹೋರಾಟವು ಆಡಳಿತಾರೂಢರನ್ನು ವಿಚಲಿತಗೊಳಿಸಿದೆ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ನಾಯಕರ ಭಾಗಿ: ಈ ಬೃಹತ್ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕರಾದ ಸುರೇಶ್ ಕುಮಾರ್, ಬಸವರಾಜ ಮತ್ತಿಮೂಡ್, ಗುರ್ಮೆ ಸುರೇಶ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಾಲ್ನಡಿಗೆ ಜಾಥಾದಲ್ಲಿ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್ ದುರಾಡಳಿತದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು.




