ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶಿಕ್ಷಕರು ಕ್ರಿಯಾಶೀಲತೆಯಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸಿದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಡಯಟ್ ಪ್ರಾಂಶುಪಾಲರಾದ ಎಸ್. ನಾಗಭೂಷಣ್ ತಿಳಿಸಿದರು.
ಚಿತ್ರದುರ್ಗ ತಾಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಿಗೆ ಶನಿವಾರ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಬುನಾಧಿ ಕಲಿಕೆ ಮತ್ತು ಪರಿಹಾರ ಬೋಧನೆ: 8ನೇ ತರಗತಿ ವಿದ್ಯಾರ್ಥಿಗಳಲ್ಲಿರುವ ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಸಾಮರ್ಥ್ಯವನ್ನು ಗುರುತಿಸಿ, ಹಿಂದುಳಿದ (ನಿಧಾನಗತಿ) ಕಲಿಕಾ ಮಕ್ಕಳಿಗೆ ನಿರಂತರ ಪರಿಹಾರ ಬೋಧನೆ ನೀಡಬೇಕು. ಇದರಿಂದ ಅವರ ಕಲಿಕಾ ಸಾಮರ್ಥ್ಯ ಹೆಚ್ಚಿ, ಉತ್ತಮ ಫಲಿತಾಂಶ ಬರಲು ಸಾಧ್ಯವಾಗುತ್ತದೆ.
ತರಬೇತಿ ಮತ್ತು ಮಾರ್ಗದರ್ಶನ: ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡಲು 'ಮರುಸಿಂಚನ', ಪಾಠ ಆಧಾರಿತ ಮೌಲ್ಯಾಂಕನ ಹಾಗೂ ಮೌಲ್ಯ ಶಿಕ್ಷಣ ಕುರಿತು ತರಬೇತಿ ನೀಡಲಾಗಿದೆ.
ಕಾರ್ಯೋನ್ಮುಖರಾಗಲು ಕರೆ: ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆ ನೀಡುವ ಮಾರ್ಗದರ್ಶನಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಶಾಲೆಯಲ್ಲಿ ಶಿಕ್ಷಕರ ಸಭೆ ನಡೆಸಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು.
ಇದೇ ಸಂದರ್ಭದಲ್ಲಿ ಮಾತನಾಡಿದ ಉಪ ಪ್ರಾಂಶುಪಾಲರಾದ ಎಸ್. ಸಿ. ಪ್ರಸಾದ್ ಅವರು, "ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ 29 ಅಂಶಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು. ಸೇತುಬಂಧ, ಪ್ರತಿ ಪಾಠದ ಕಲಿಕಾ ಮೌಲ್ಯಾಂಕನ, ದ್ವೈಮಾಸಿಕ ಪೋಷಕರ ಸಭೆಗಳು ಹಾಗೂ ನಿಧಾನಗತಿ ಕಲಿಕಾ ವಿದ್ಯಾರ್ಥಿಗಳ ಕಲಿಕಾ ಬಲವರ್ಧನೆ ಮೂಲಕ ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು" ಎಂದು ಹೇಳಿದರು.
ಸಭೆಯಲ್ಲಿ ಎಫ್‌ಎಲ್‌ಎನ್, ಮೌಲ್ಯ ಶಿಕ್ಷಣ, NMMS, NPEP, ಮಿಷನ್ ಪ್ರಕೃತಿ, ಇನ್‌ಸ್ಪೈರ್ ಅವಾರ್ಡ್ ಹಾಗೂ 'ಪ್ರಶಸ್ತ' ಆ್ಯಪ್ ಕುರಿತು ಮಾಹಿತಿ ನೀಡಲಾಯಿತು.
ಈ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಿರಿಯ ಉಪನ್ಯಾಸಕರಾದ ತಿಪ್ಪೇಸ್ವಾಮಿ, ಜ್ಞಾನೇಶ್ವರಿ, ಅನಿತಾ, ಉಪನ್ಯಾಸಕರಾದ ಎಸ್. ಬಸವರಾಜು, ಎಲ್. ರೇವಣ್ಣ, ಶಂಕರನಾಯ್ಕ, ರಂಗಸ್ವಾಮಿ, ತಾಂತ್ರಿಕ ಸಹಾಯಕರಾದ ಅವಿನಾಶ್, ಬಿಆರ್‌ಸಿ ರಜೀವ್, ರಾಜಪ್ಪ ಹಾಗೂ ತಾಲೂಕಿನ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.




