ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಥವಾ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಜೆಡಿಎಸ್ ನಡುವಿನ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ.
"ಜೆಡಿಎಸ್ ಮಾಸ್ಟರ್ ಸ್ಟ್ರೋಕ್ ಎಂದರೆ ರೈತರನ್ನು ಒಕ್ಕಲೆಬ್ಬಿಸುವುದಲ್ಲ, ರೈತರ ಹಿತ ಕಾಯುವುದು" ಎಂದು ಜೆಡಿಎಸ್ ಪಕ್ಷವು ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
'ಇಷ್ಟವಿಲ್ಲದಿದ್ದರೆ ಹೋಗಬಹುದು' ಎನ್ನುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ತೀವ್ರ ಅಹಂಕಾರದಿಂದ ಕೂಡಿದೆ ಎಂದು ಜರೆದಿರುವ ಜೆಡಿಎಸ್, ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ನಿಲುವನ್ನು ಕಟುವಾಗಿ ಖಂಡಿಸಿದೆ.
ಕುಮಾರಸ್ವಾಮಿ ಇತಿಹಾಸ ನೆನಪಿಸಿದ ಜೆಡಿಎಸ್:
ಸುಮಾರು 450 ದಿನಗಳಿಂದ ಹೋರಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿರುವ ಜೆಡಿಎಸ್, ಈ ಹಿಂದೆ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಘಟನೆಯನ್ನು ನೆನಪಿಸಿದೆ. "ಅಂದು ಬಿಡದಿ ಭಾಗದ ರೈತರು ಆತಂಕಗೊಂಡಾಗ, ಕುಮಾರಸ್ವಾಮಿ ಅವರು ಸ್ವತಃ ರೈತರನ್ನು ವಿಧಾನಸೌಧಕ್ಕೆ ಕರೆಸಿ, ಅವರ ಅಹವಾಲು ಆಲಿಸಿ, ರೈತರ ಮಾತಿಗೆ ಗೌರವ ಕೊಟ್ಟು ಯೋಜನೆಯನ್ನೇ ಕೈಬಿಟ್ಟಿದ್ದರು. ಈ ಇತಿಹಾಸ ಸಚಿವರಿಗೆ ಗೊತ್ತಿಲ್ಲವೇ ಅಥವಾ ಜಾಣ ಕುರುಡೇ?" ಎಂದು ಜೆಡಿಎಸ್ ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕರ ಹಳೇ ನಿಲುವನ್ನು ನೆನಪಿಸಿರುವ ಪಕ್ಷವು, "ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್ ಇದೇ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಸತ್ಯ ಶೋಧನಾ ಸಮಿತಿಯನ್ನು ರಚಿಸಿತ್ತು. ಆದರೆ ಇಂದು ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ಸಿಗರು ಈ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ?" ಎಂದು ಆಕ್ರೋಶ ಹೊರಹಾಕಿದೆ.
ರಿಯಲ್ ಎಸ್ಟೇಟ್ ದಂಧೆ ಆರೋಪ:
ಪ್ರಸ್ತುತ ಶೇ. 80ರಷ್ಟು ರೈತರು ಭೂಸ್ವಾಧೀನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತಿದ್ದಾರೆ. ಒಂದಿಂಚು ಭೂಮಿ ನೀಡಲು ರೈತರು ಒಪ್ಪುತ್ತಿಲ್ಲ. ಹೀಗಿದ್ದರೂ, ಇದು ಹೆಚ್.ಡಿ. ಕುಮಾರಸ್ವಾಮಿ ಅವರ ಹಳೇ ಯೋಜನೆ ಎಂದು ನೆಪವೊಡ್ಡಿ ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ರಾಜಕಾರಣ ಎಂದು ಜೆಡಿಎಸ್ ಲೇವಡಿ ಮಾಡಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 'ಅಭಿವೃದ್ಧಿ' ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಕಸಿದುಕೊಳ್ಳುವ ಹಪಾಹಪಿತನ ತೋರುತ್ತಿದ್ದಾರೆ. ಈ ಯೋಜನೆಯಿಂದಾಗಿ ಅನ್ನದಾತರು ಸಂತ್ರಸ್ತರಾಗುತ್ತಿದ್ದಾರೆ. ಜೆಡಿಎಸ್ ಪಕ್ಷಕ್ಕೆ ರೈತರ ಹಿತ ಮುಖ್ಯವೇ ಹೊರತು ರಿಯಲ್ ಎಸ್ಟೇಟ್ ದಂಧೆಯಲ್ಲ ಎಂದು ಪಕ್ಷವು ತನ್ನ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.



