ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಉನ್ನತ ಮಟ್ಟದ ನಿರ್ಧಾರಕ ಸಮಿತಿಯಾದ ‘ಸಂಸದೀಯ ಮಂಡಳಿ’ ಪುನಾರಚನೆಗೆ ರಾಷ್ಟ್ರೀಯ ನಾಯಕತ್ವ ಮುಂದಾಗಿದ್ದು, ರಾಜ್ಯದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಈ ಸಮಿತಿಯಿಂದ ಕೈಬಿಡುವ ಸಾಧ್ಯತೆಗಳು ದಟ್ಟವಾಗಿವೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಅವರಿಗೆ ಪಕ್ಷದ ತೀರ್ಮಾನಗಳನ್ನು ಕೈಗೊಳ್ಳುವ ಅತ್ಯುನ್ನತ ಸಂಸ್ಥೆಯಾದ 12 ಸದಸ್ಯರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು.
ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪಕ್ಷಕ್ಕೆ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿಯೋಜನೆಗೊಂಡ ನಿತಿನ್ ನಬಿನ್ ಅವರು ಸರಣಿ ಸಂಘಟನಾತ್ಮಕ ಬದಲಾವಣೆಗಳನ್ನು ತರುತ್ತಿದ್ದು, ಅದರ ಭಾಗವಾಗಿ ಬಿಎಸ್‌ವೈ ಸೇರಿದಂತೆ ಹಲವು ಹಿರಿಯ ನಾಯಕರಿಗೆ ವಿಶ್ರಾಂತಿ ನೀಡಲು ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ.
ಹೊಸ ಮುಖಗಳಿಗೆ ಆದ್ಯತೆ:ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಟಿಕೆಟ್ ಹಂಚಿಕೆ ಸೇರಿದಂತೆ ಪಕ್ಷದ ಪ್ರಮುಖ ಕಾರ್ಯತಂತ್ರಗಳನ್ನು ರೂಪಿಸುವ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪ ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರು.
ಆದರೆ, ಮುಂಬರುವ ಸವಾಲುಗಳನ್ನು ಎದುರಿಸಲು ರಾಷ್ಟ್ರಮಟ್ಟದಲ್ಲಿ ಯುವ ಹಾಗೂ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಬಿಜೆಪಿ ಮುಂದಾಗಿದೆ. ಈ ಕುರಿತು ಬಿಎಸ್‌ವೈ ಅವರಿಗೆ ಈಗಾಗಲೇ ಹೈಕಮಾಂಡ್‌ನಿಂದ ಪರೋಕ್ಷ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕರ್ನಾಟಕದ ಪ್ರಾತಿನಿಧ್ಯ:ಪ್ರಸ್ತುತ ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿದಿದ್ದು, ಇತ್ತೀಚಿಗಷ್ಟೇ ಕರ್ನಾಟಕದ ಎಂ. ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸಂಘಟನೆಯಲ್ಲಿ ಸೂಕ್ತ ಪ್ರಾತಿನಿಧ್ಯವಿದ್ದು, ಸಂಸದೀಯ ಮಂಡಳಿಯಲ್ಲಿ ಬದಲಾವಣೆ ಮಾಡುವುದು ಹೈಕಮಾಂಡ್‌ಗೆ ಸುಲಭವಾಗಿದೆ. ಬಿಜೆಪಿ ವರಿಷ್ಠರು ಕೈಗೊಳ್ಳುತ್ತಿರುವ ಈ ಸಂಘಟನಾತ್ಮಕ ಪರಿಷ್ಕರಣೆ ಹಾಗೂ ಹಿರಿಯ ನಾಯಕರನ್ನು ಹಿನ್ನೆಲೆಗೆ ಸರಿಸುವ ನಿರ್ಧಾರ ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.




