ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಇದೇ ಮೇ 9 ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ "ಅಭಿಮಾನೋತ್ಸವ" ಕಾರ್ಯಕ್ರಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಬಿ.ವೈ.ವಿಜಯೇಂದ್ರ ಅವರು ಶ್ರೀ ಮಠದ ಆಶೀರ್ವಾದ ಕೋರಿದ್ದಾರೆ.
ಬೆಂಗಳೂರಿನ ವಿಜಯನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಸ್ವಾಮೀಜಿಗಳಿಗೆ ಗೌರವಪೂರ್ವಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದ ವಿಜಯೇಂದ್ರ ಅವರು, ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬೃಹತ್ 'ಅಭಿಮಾನೋತ್ಸವ' ಕಾರ್ಯಕ್ರಮಕ್ಕೆ ಶ್ರೀಗಳನ್ನು ಭಕ್ತಿಪೂರ್ವಕವಾಗಿ ಆಮಂತ್ರಿಸಿದರು.
ಈ ಆಮಂತ್ರಣ ನೀಡುವ ಸಂದರ್ಭದಲ್ಲಿ ರಾಜಕೀಯ ಪ್ರಮುಖರು ಉಪಸ್ಥಿತರಿದ್ದು, ಶ್ರೀಗಳ ಜೊತೆ ಕಾರ್ಯಕ್ರಮದ ಕುರಿತು ಚರ್ಚಿಸಿದರು.
ಶಾಸಕ ಹರೀಶ್ ಪೂಂಜಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಮುಖಂಡ ಉಮೇಶ್ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಕಾರ್ಯಕ್ರಮದ ಹಿನ್ನೆಲೆ:
ಜನಮೆಚ್ಚಿದ ಜನನಾಯಕ ಬಿ.ಎಸ್.ಯಡಿಯೂರಪ್ಪ ಅವರ ಮೇಲಿರುವ ಪ್ರೀತಿ ಮತ್ತು ಗೌರವದ ಸಂಕೇತವಾಗಿ ಈ 'ಅಭಿಮಾನೋತ್ಸವ'ವನ್ನು ಆಯೋಜಿಸಲಾಗಿದೆ. ಚಿತ್ರದುರ್ಗದಲ್ಲಿ ನಡೆಯಲಿರುವ ಈ ಬೃಹತ್ ಸಮಾವೇಶಕ್ಕೆ ನಾಡಿನ ವಿವಿಧ ಮಠಾಧೀಶರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಕ್ಷಿಯಾಗಲಿದ್ದಾರೆ.
"ನಮ್ಮ ನೆಚ್ಚಿನ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಮಾರ್ಗದರ್ಶನ ಮತ್ತು ಉಪಸ್ಥಿತಿ ನಮಗೆ ಆನೆಬಲ ನೀಡಲಿದೆ" ಎಂದು ಈ ಸಂದರ್ಭದಲ್ಲಿ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.


