ಚಂದ್ರವಳ್ಳಿ ನ್ಯೂಸ್, ನವದೆಹಲಿ/ಬೆಂಗಳೂರು:
ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಚಿವ ಸಂಪುಟ ವಿಸ್ತರಣೆಯ ಕಾರ್ಯಕ್ರಮ ಮತ್ತಷ್ಟು ವಿಳಂಬವಾಗಲಿದೆ. ನಿಗದಿತ ವೇಳಾಪಟ್ಟಿಯಂತೆ ಬುಧವಾರ ನಡೆಯಬೇಕಿದ್ದ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಲ್ಪಟ್ಟಿದ್ದು, ಕಾಂಗ್ರೆಸ್ ಹೈಕಮಾಂಡ್‌ನಿಂದ ಅಂತಿಮ ಪಟ್ಟಿಗೆ ಇನ್ನೂ ಒಪ್ಪಿಗೆ ಸಿಗದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ದೆಹಲಿಗೆ ತೆರಳಿದ್ದರು. ಆದರೆ, ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನಿವಾಸದ ಬಳಿ 'ನೀಟ್' ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ನಿರತರಾಗಿದ್ದರಿಂದ, ಸಚಿವರ ಆಯ್ಕೆ ಕುರಿತ ಸಭೆ ನಡೆಯಲು ಸಾಧ್ಯವಾಗಲಿಲ್ಲ ಎಂದು ಸಿಎಂ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ವೇಳೆ ತಳ್ಳಾಟ, ರಾಹುಲ್ ಗಾಂಧಿ ಹಸ್ತಕ್ಷೇಪ:
ದೆಹಲಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ, "ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಾವು ಧ್ವನಿ ಎತ್ತಿದ್ದೇವೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಯಕರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಪೊಲೀಸರು ನನ್ನನ್ನೂ ಎಳೆದಾಡಲು ಮುಂದಾದಾಗ, 'ಅವರು ಮುಖ್ಯಮಂತ್ರಿ, ಅವರನ್ನು ಮುಟ್ಟಬೇಡಿ' ಎಂದು ರಾಹುಲ್ ಗಾಂಧಿಯವರು ತಾಕೀತು ಮಾಡಿ, ನನ್ನನ್ನು ಪಕ್ಕಕ್ಕೆ ಕರೆದೊಯ್ದರು," ಎಂದು ಘಟನೆಯನ್ನು ವಿವರಿಸಿದರು.
ಹೈಕಮಾಂಡ್ ನಿರ್ಧಾರವೇ ಅಂತಿಮ:
"ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ಹೊಸ ಮುಖಗಳು, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರಗಳನ್ನು ಪರಿಗಣಿಸಿ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಪಕ್ಷಕ್ಕೆ ಒಳ್ಳೆಯದಾಗುವುದಾದರೆ ಎಂಥದ್ದೇ ನಿರ್ಧಾರಕ್ಕೂ ನಾವು ಬದ್ಧ."
ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿಗಳು.
ಎಲ್ಲಾ ಸ್ಥಾನಗಳನ್ನು ತುಂಬುವ ಇಚ್ಛೆ:
"ಸಚಿವ ಸಂಪುಟದಲ್ಲಿ ಖಾಲಿ ಇರುವ 20 ಸ್ಥಾನಗಳನ್ನೂ ಭರ್ತಿ ಮಾಡಲು ನಾನು ಬಯಸುತ್ತೇನೆ. ಖಾಲಿ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ. ಸಚಿವ ಸ್ಥಾನಗಳ ಜೊತೆಗೆ ಚೀಫ್ ವಿಪ್, ವಿಧಾನ ಪರಿಷತ್ ಸಭಾಪತಿ ಹಾಗೂ ಸ್ಪೀಕರ್ ಹುದ್ದೆಗಳನ್ನೂ ಭರ್ತಿ ಮಾಡಬೇಕಿದೆ. ಪ್ರಕ್ರಿಯೆಯನ್ನು ಮುಂದೂಡುವುದು ನನಗೂ ಇಷ್ಟವಿಲ್ಲ" ಎಂದು ಸಿಎಂ ಡಿಕೆಶಿ ಹೇಳಿದರು.
ಶಾಸಕರೆಲ್ಲರೂ ಒಂದೇ:
"ನನಗೆ 136 ಶಾಸಕರು ಮತ್ತು ಪರಿಷತ್ ಸದಸ್ಯರೆಲ್ಲರೂ ಒಂದೇ. ಪ್ರತಿಯೊಬ್ಬರಿಗೂ ಅರ್ಹತೆ ಇದೆ. ನಾನು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಯುವಕರಿಗೂ ಸೂಕ್ತ ಅವಕಾಶ ನೀಡಬೇಕು ಎಂಬ ಬಯಕೆ ನನಗಿದೆ. ಹೈಕಮಾಂಡ್ ಮಾರ್ಗದರ್ಶನದಂತೆ ಮುಂದಿನ ಹೆಜ್ಜೆ ಇಡಲಾಗುವುದು" ಎಂದು ಶಿವಕುಮಾರ್ ತಿಳಿಸಿದರು.
ಮಂಗಳವಾರ ರದ್ದಾಗಿದ್ದ ಸಭೆಯನ್ನು ಬುಧವಾರ ನಡೆಸಲು ತೀರ್ಮಾನಿಸಲಾಗಿದ್ದು, ದೆಹಲಿ ನಾಯಕರು ಲಭ್ಯವಾದ ತಕ್ಷಣ ಸಚಿವರ ಪಟ್ಟಿಯನ್ನು ಆಖೈರುಗೊಳಿಸಿ ಪ್ರಮಾಣವಚನಕ್ಕೆ ಹೊಸ ದಿನಾಂಕ ನಿಗದಿಪಡಿಸಲಾಗುವುದು ಎಂದು ತಿಳಿದುಬಂದಿದೆ.



