ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಂತಹದ ಸದಾ ಬರಪೀಡಿತ ಒಣಭೂವಿಗೆ ನೀರುಣಿಸಬೇಕೆಂಬ ಹಂಬಲದೊಂದಿಗೆ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಹೋರಾಡಿದ ನೀರಾವರಿ ಹೋರಾಟಗಾರ, ರಾಜ್ಯಸಭಾ ಮಾಜಿ ಸದಸ್ಯ ಹೆಚ್.ಹನುಮಂತಪ್ಪ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ನಗರದ ಮುರುಘಾರಾಜೇಂದ್ರ ಕ್ರೀಡಾಂಗಣದಲ್ಲಿ ಸೋಮವಾರ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದ ರಾಜ್ಯಸಭಾ ಮಾಜಿ ಸಂಸದ ಹೆಚ್.ಹನುಮಂತಪ್ಪ ಅವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ, ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಮಾಧ್ಯಮದರೊಂದಿಗೆ ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯ ಏಳಿಗೆಗೆ ಹನುಮಂತಪ್ಪ ಅವರ ಕೊಡುಗೆ ಅಪಾರ. ಜಿಲ್ಲೆಯ ಹಲವು ಪ್ರಮುಖ ಕೃಷಿ ಯೋಜನೆಗಳಿಗೆ, ಭದ್ರಾ ಮೇಲ್ದಂಡೆಯಂತಹ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಾಗೂ ರೈತರ ಹಿತದೃಷ್ಟಿಯ ಹೋರಾಟಗಳಿಗೆ ಅವರು ಪ್ರಮುಖ ಶಕ್ತಿಯಾಗಿದ್ದರು. ಸಂಸತ್ತಿನಲ್ಲಿ ಮತ್ತು ಸರ್ಕಾರದ ಮಟ್ಟದಲ್ಲಿ ಸದಾ ಧ್ವನಿ ಎತ್ತುತ್ತಾ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಭಗೀರಥ ಅವರು ಎಂದು ಗುಣಗಾನ ಮಾಡಿದರು.
1979-80 ರಿಂದಲೂ ನನಗೆ ಅವರ ಜೊತೆ ನಿಕಟವಾದ ಒಡನಾಟವಿತ್ತು. ಆಗ ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಆ ಸಂದರ್ಭದಲ್ಲಿ ನಾವು ಅವರ ಪಕ್ಕದ ಮನೆಯಲ್ಲೇ ವಾಸವಿದ್ದು, ಒಟ್ಟಿಗೆ ಬೆಳೆದವರು. ಅವರ ಜೊತೆಯಲ್ಲಿ ರಾಜಕಾರಣ ಮಾಡುತ್ತಾ ಬೆಳೆದ ನಮಗೆ ಅವರ ಸಾವು ವೈಯಕ್ತಿಕವಾಗಿಯೂ ತೀವ್ರ ನೋವು ತಂದಿದೆ ಎಂದು ಮುಖ್ಯಮಂತ್ರಿಗಳ ಹಳೆಯ ದಿನಗಳನ್ನು ನೆನಪಿಸಿಕೊಂಡರು.
ಹೆಚ್. ಹನುಮಂತಪ್ಪ ಅವರು ರೈಲ್ವೆ ಕಮಿಷನ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಆ ನಂತರ ರಾಜ್ಯಸಭಾ ಸದಸ್ಯರಾಗಿ ಅತ್ಯಂತ ಯಶಸ್ವಿಯಾಗಿ ಕರ್ತವ್ಯ ನಿಭಾಯಿಸಿದರು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾಗಾಂಧಿ ಅವರಿಗೂ ಅತ್ಯಂತ ಆಪ್ತರಾಗಿದ್ದುಕೊಂಡು, ರಾಷ್ಟ್ರಮಟ್ಟದಲ್ಲಿ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದರು. ಮೂರು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ಅಪಾರ ಜನಸೇವೆ ಮಾಡಿದ್ದಾರೆ ಎಂದರು.
ಹನುಮಂತಪ್ಪ ಅವರು ಅತ್ಯಂತ ಸರಳ ಸಜ್ಜನಿಕೆಯ ಜೀವನ ನಡೆಸಿದವರು. ಎಸ್. ನಿಜಲಿಂಗಪ್ಪ ಅವರ ತತ್ವ ಆದರ್ಶಗಳನ್ನು ಮತ್ತು ತಮ್ಮದೇ ಆದ ವೈಚಾರಿಕ ನಿಲುವುಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದರು. ಜಿಲ್ಲೆಯಲ್ಲಿ ಪಕ್ಷಕ್ಕೆ ಭದ್ರ ಬುನಾದಿ ಹಾಕುವಲ್ಲಿ ಹಾಗೂ ಪಕ್ಷದ ಸ್ವಂತ ಕಚೇರಿ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ದೊಡ್ಡದಿದೆ. ಯಾರನ್ನೂ ವೈಯಕ್ತಿಕವಾಗಿ ಹಳಿಯದ ಅವರು, ಸದಾ ಪಕ್ಷದ ಕಾರ್ಯಕರ್ತರ ಏಳಿಗೆಗೆ ಚಿಂತಿಸುತ್ತಿದ್ದರು. ಸರ್ಕಾರದಿಂದ ಅವರಿಗೆ ಸಲ್ಲಬೇಕಾದ ಎಲ್ಲಾ ಸಕಲ ಗೌರವಗಳನ್ನು ಸಲ್ಲಿಸಲು ನಾವು ಬದ್ಧರಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಾವು ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ಶೀಘ್ರದಲ್ಲೇ ಹಮ್ಮಿಕೊಳ್ಳಲಿದ್ದೇವೆ. ಈ ಬಗ್ಗೆ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.



