ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಜಪಾನಿನ ಐಚಿ-ನಗೋಯಾದಲ್ಲಿ ಆಯೋಜನೆಗೊಂಡಿರುವ 20ನೇ ಏಷ್ಯನ್ ಗೇಮ್ಸ್‌ನ ಮಹಿಳೆಯರ ಹೈಜಂಪ್ ಸ್ಪರ್ಧೆಗೆ ಭಾರತ ತಂಡದ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ಜಿಲ್ಲೆಯ ಸಿಂಧೆಗೆರೆಯ ಪ್ರತಿಭಾನ್ವಿತ ಕ್ರೀಡಾಪಟು ಸುಪ್ರಿಯಾ ಅವರಿಗೆ ಮಾಜಿ ಸಚಿವ ಸಿ.ಟಿ. ರವಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
"ಸುಪ್ರಿಯಾ ನಮ್ಮ ಮಣ್ಣಿನ ಮಗಳು, ನಮ್ಮ ಹೆಮ್ಮೆ" ಎಂದು ಬಣ್ಣಿಸಿರುವ ಅವರು, ಗ್ರಾಮೀಣ ಭಾಗದ ಪ್ರತಿಭೆಯೊಂದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯಲು ಸಜ್ಜಾಗಿರುವುದು ಪ್ರತಿಯೊಬ್ಬ ಕನ್ನಡಿಗನಿಗೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸುಪ್ರಿಯಾ ಅವರ ಕಠಿಣ ಪರಿಶ್ರಮ ಮತ್ತು ಛಲ ಏಷ್ಯನ್ ಗೇಮ್ಸ್‌ನಲ್ಲಿ ಅವರಿಗೆ ಮಾತ್ರವಲ್ಲದೆ ಇಡೀ ಭಾರತ ದೇಶಕ್ಕೆ ಗೆಲುವಿನ ಯಶಸ್ಸು ತರಲಿ ಎಂದು ಸಿ.ಟಿ. ರವಿ ಶುಭ ಹಾರೈಸಿದ್ದಾರೆ.




