ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಇಂದು ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಹತ್ವದ ಜಂಟಿ ಸಭೆ ನಡೆಸಿದ ಅವರು, ದಕ್ಷ ಹಾಗೂ ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.
"ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು. ಯಾವುದೇ ಕಾರಣಕ್ಕೂ ಯಾರ ಒತ್ತಡಕ್ಕೂ ಮಣಿಯದೇ ಮುಕ್ತವಾಗಿ ಕೆಲಸ ಮಾಡಿ" ಎಂದು ಸಿಎಂ ಅಧಿಕಾರಿಗಳಿಗೆ ಪೂರ್ಣ ಸ್ವಾತಂತ್ರ್ಯ ಘೋಷಿಸಿದ್ದಾರೆ.
ರೌಡಿಗಳ ಹೆಡೆಮುರಿ ಕಟ್ಟಿ, ಡ್ರಗ್ಸ್ ದಂಧೆ ಬೇರುಸಹಿತ ಕಿತ್ತೊಗೆಯಿರಿ!:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಕಠಿಣ ಸಂದೇಶ ರವಾನಿಸಿದ್ದಾರೆ.
ಅಕ್ರಮಗಳಿಗೆ ಬ್ರೇಕ್: ಜೂಜು, ಕ್ಲಬ್ ಹಾಗೂ ಡ್ರಗ್ಸ್ ದಂಧೆಯನ್ನು ರಾಜ್ಯದಿಂದ ಬೇರುಸಹಿತ ಕಿತ್ತೊಗೆಯಬೇಕು.
ರೌಡಿಸಂಗೆ ಮುಕ್ತಿ: ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುವ ರೌಡಿಗಳ ಹೆಡೆಮುರಿ ಕಟ್ಟಲು ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ.
ಒತ್ತಡಕ್ಕೆ ಮಣಿಯಬೇಡಿ: ಯಾವುದೇ ರಾಜಕೀಯ ಅಥವಾ ಬಾಹ್ಯ ಪ್ರಭಾವಗಳಿಗೆ ಒಳಗಾಗದೆ, ಕಾನೂನಿನ ಚೌಕಟ್ಟಿನಲ್ಲಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಎಂದು ಸಿಎಂ ಸೂಚಿಸಿದರು.
'ಸಿಎಸ್ಆರ್' ಫಂಡ್ ದುರ್ಬಳಕೆಗೆ ತಡೆ: 25 ದಿನಗಳ ಗಡುವು!:
ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗ್ಗೆ ಕಠಿಣ ನಿಲುವು ತಳೆದ ಡಿ.ಕೆ. ಶಿವಕುಮಾರ್, ಅಧಿಕಾರಿಗಳಿಗೆ ಮಹತ್ವದ ಟಾಸ್ಕ್ ಒಂದನ್ನು ನೀಡಿದ್ದಾರೆ.
"ರಾಜ್ಯದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ದುರ್ಬಳಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ತಕ್ಷಣವೇ ಬ್ರೇಕ್ ಬೀಳಬೇಕು. ಪ್ರತಿಯೊಂದು ಇಲಾಖೆಯಲ್ಲೂ ಬಾಕಿ ಉಳಿದಿರುವ ಕೆಲಸಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಮುಂದಿನ 25 ದಿನಗಳ ಒಳಗಾಗಿ ನನಗೆ ಸಮಗ್ರ ವರದಿ ನೀಡಬೇಕು."
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ.
ಜನ ಮೆಚ್ಚುವ ಆಡಳಿತ ನೀಡಿ, ಸರ್ಕಾರಕ್ಕೆ ಹೆಸರು ತನ್ನಿ:
"ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು" ಎಂದು ಕಿವಿಮಾತು ಹೇಳಿದ ಸಿಎಂ, ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸರ್ಕಾರದ ಜನಕಲ್ಯಾಣ ಯೋಜನೆಗಳು ಸಮರ್ಥವಾಗಿ ಜನಸಾಮಾನ್ಯರನ್ನು ತಲುಪಬೇಕು. ಆ ಮೂಲಕ ರಾಜ್ಯದ ಅಭಿವೃದ್ಧಿಗೆ ಮೆಟ್ಟಿಲಾಗುವ ಜೊತೆಗೆ, ಜನ ಮೆಚ್ಚುವ ಕೆಲಸ ಮಾಡಿ ಸರ್ಕಾರಕ್ಕೂ ಒಳ್ಳೆಯ ಹೆಸರು ತರಬೇಕು ಎಂದು ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಕರೆ ನೀಡಿದರು.



