Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸ್ಟಾಲಿನ್ ಅವರು ಬರೆದಿರುವ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ

Advertisement
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಬರೆದಿರುವ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗ-1 ಮತ್ತು 2 ಭಾಗವಾಗಿ ಪ್ರತಿಕ್ರಿಯೆ ನೀಡಿದ್ದು ಅದರ ಕನ್ನಡ ಸಾರಾಂಶ ಹೀಗಿದೆ.
ಭಾಗ:-1
ಆತ್ಮೀಯ ಸ್ಟಾಲಿನ್ ಅವರೇ, ಕರ್ನಾಟಕ ರಾಜ್ಯದ ಪರವಾಗಿ ಶುಭಾಶಯಗಳು. ನಿಮ್ಮ ಪತ್ರ ಮತ್ತು ಅದರೊಂದಿಗೆ ಕಳುಹಿಸಿರುವ ತಮಿಳುನಾಡು ಸರ್ಕಾರ ಕೇಂದ್ರ ಮತ್ತು ರಾಜ್ಯಗಳ ಸಂಬಂಧದ ಅಧ್ಯಯನಕ್ಕಾಗಿ ರಚಿಸಿರುವ ಉನ್ನತ ಮಟ್ಟದ ಸಮಿತಿಯ ವರದಿಯ ಕೆಲವು ಭಾಗಗಳಿಗಾಗಿ ಧನ್ಯವಾದಗಳು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಮಾಡಬೇಕಾಗಿರುವ ಬದಲಾವಣೆ ಕುರಿತು ಪ್ರಾರಂಭಿಸಿರುವ ಪ್ರಯತ್ನಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

ಈ ವರದಿಯಲ್ಲಿ ಎತ್ತಿರುವ ಪ್ರಶ್ನೆಗಳು ಭಾರತದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿದಿವೆ. ನಮ್ಮ ಸಂವಿಧಾನವು ಆ ಕಾಲದ  ಐತಿಹಾಸಿಕ ಒತ್ತಡಗಳ ನಡುವೆ ರಚನೆಯಾಗಿದೆ. ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಭಾರತ ರಾಜ್ಯಗಳ ಒಕ್ಕೂಟ ಆಗಿರುತ್ತದೆ, ಕೇಂದ್ರೀಕೃತವಾಗಿರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ದೇಶದ ವಿಭಜನೆ ಮತ್ತು ಸೇರ್ಪಡೆಯ ಅಸ್ಥಿರತೆಯ ನಡುವೆ ನಡೆದ ಸಾಂವಿಧಾನಿಕ ಸಭೆಯಲ್ಲಿ, ಕೇಂದ್ರಕ್ಕೆ ಹೆಚ್ಚು ಅಧಿಕಾರ ಇರುವಂತಹ ಕೇಂದ್ರಿಕೃತ ಆಡಳಿತ ವ್ಯವಸ್ಥೆಯನ್ನು ಸೇರಿಸಲಾಯಿತು. ಒಕ್ಕೂಟ ವ್ಯವಸ್ಥೆಯನ್ನು ಕೇವಲ ಆಡಳಿತದ ದೃಷ್ಟಿಯಲ್ಲಿ ರೂಪಿಸಿದ್ದಲ್ಲ, ಇದು ಅಧಿಕಾರದ ಕೇಂದ್ರೀಕರಣದ ವಿರುದ್ಧದ ರಚನಾತ್ಮಕ ರಕ್ಷಣೆಯ ವ್ಯವಸ್ಥೆಯಾಗಿದೆ. ಆದರೆ ಇಂದಿನ ವ್ಯವಸ್ಥೆಯು ದಶಕಗಳಿಂದ ಅಧಿಕಾರದ ಕೇಂದ್ರೀಕರಣದತ್ತ ಸಾಗುತ್ತಿದೆ.

ಸಂವಿಧಾನದ ಸಮವರ್ತಿ ಪಟ್ಟಿಯ (ಕೇಂದ್ರ ಮತ್ತು ರಾಜ್ಯ ಎರಡಕ್ಕೂ ಸೇರಿದ ಸಂವಿಧಾನದ ಕೆಲವು ವಿಷಯಗಳು) ವಿವರಣಾತ್ಮಕ ವ್ಯಾಖ್ಯಾನಗಳಿಂದಾಗಿ  ಕೇಂದ್ರ-ರಾಜ್ಯಗಳ ನಡುವಣ ಸಂಬಂಧಗಳ ಸಮತೋಲನ ತಪ್ಪುತ್ತಿದೆ. ಷರತ್ತುಬದ್ಧ ಅನುದಾನ ಹಂಚಿಕೆ, ರಾಜ್ಯಗಳಿಗೆ ತಮ್ಮ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಲು ಅವಕಾಶ ಇಲ್ಲದಂತೆ ವಿನ್ಯಾಸಗೊಳಿಸಿರುವ ಕೇಂದ್ರದ ಯೋಜನೆಗಳ ಹೇರಿಕೆ, ರಾಜ್ಯಪಾಲರ ಅನುಮೋದನೆ ವಿಚಾರದಲ್ಲಿ ತೊಡಕುಗಳ ಕಾರಣಗಳಿಂದಾಗಿ ಒಂದೆಡೆ ರಾಜ್ಯಗಳ ಅಧಿಕಾರ ಕ್ಷೀಣಿಸಿದರೆ, ಇನ್ನೊಂದೆಡೆ ಕೇಂದ್ರದ ಅಧಿಕಾರ ವೃದ್ಧಿಸುತ್ತಿದೆ.

ಇದರಿಂದಾಗಿ ಉದ್ದೇಶಿತ ಸಹಕಾರಿ ಒಕ್ಕೂಟ ವ್ಯವಸ್ಥೆಯು ಈಗ ಒತ್ತಾಯಪೂರ್ವಕ ಒಕ್ಕೂಟ ವ್ಯವಸ್ಥೆಯಾಗಿ ಬದಲಾಗುತ್ತಿದೆ. ರಾಜ್ಯಗಳ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರ್ಣಯಗಳನ್ನು ಬಲವಂತವಾಗಿ ಜಾರಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ ಪರಿಚ್ಛೇದ 246 ಮತ್ತು 7ನೇ ಶೆಡ್ಯೂಲ್ ಹಾಗೂ 245 ರಿಂದ 254ರ ಪರಿಚ್ಛೇದಗಳ ಮರುಪರಿಶೀಲನೆ ನಡೆಯಬೇಕಾದ ಅಗತ್ಯವಿದೆ.

ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿರುವ ಹಲವಾರು ಅಂಶಗಳಿಗೆ ಕರ್ನಾಟಕ ರಾಜ್ಯದ ಸಹಮತ ಕೂಡಾ ಇದೆ. ವಿತ್ತೀಯ ಒಕ್ಕೂಟ ವ್ಯವಸ್ಥೆಯ ಅಧಿಕಾರವನ್ನು ಜವಾಬ್ದಾರಿಯುತವಾಗಿ ಚಲಾಯಿಸಬೇಕೆಂಬುದು ನಮ್ಮ ಅಭಿಪ್ರಾಯವೂ ಆಗಿದೆ. ಸಂವಿದಾನದ ಪರಿಚ್ಚೇದ 280ರ ಅಡಿಯಲ್ಲಿ ಬರುವ ಹಣಕಾಸು ಆಯೋಗದ ಪಾತ್ರ ಮತ್ತು ಪರಿಚ್ಛೇದ 279ಎ ಅಡಿಯಲ್ಲಿ ಬರುವ ಜಿಎಸ್‌ಟಿ ಕಾಯ್ದೆ ದೇಶದ ಸಾರ್ವಭೌಮತೆಗೆ ಭಂಗ ಉಂಟು ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸಬಾರದು. ಸ್ಥಳೀಯಾಡಳಿತ ಎನ್ನುವುದು ನಮ್ಮ ಸಂವಿಧಾನದ ಆಶಯ ಕೂಡಾ ಆಗಿದೆ, ಈ ಆಶಯಕ್ಕೆ ವಿರುದ್ದವಾದ ಅಧಿಕಾರದ ಕೇಂದ್ರಿಕರಣವನ್ನು ಒಪ್ಪಲಾಗದು.

ರಾಜ್ಯಗಳ ಒಕ್ಕೂಟ ವ್ಯವಸ್ಥೆಯು ನಮ್ಮ ಸಂವಿಧಾನದ ಮೂಲಭೂತ ರಚನೆಯ ಭಾಗವಾಗಿದೆ ಎನ್ನುವುದನ್ನು ಎಸ್. ಆರ್. ಬೊಮ್ಮಾಯಿ ಮತ್ತು ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದೆ. ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವದ ಸ್ಥಿರತೆಯು ಈ ಸಮತೋಲನವನ್ನು ಕಾಪಾಡಿಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಕೇಂದ್ರವು ತನ್ನ ಅಧಿಕಾರವನ್ನು ಮೀರಿದ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅತಿಯಾದ ಹಸ್ತಕ್ಷೇಪ ಮತ್ತು ಆಡಳಿತ ವ್ಯವಸ್ಥೆ ದುರ್ಬಲಗೊಳ‍್ಳಲು ಕಾರಣವಾಗಿದೆ.  ಇದರಿಂದಾಗಿ ರಾಜ್ಯಗಳು ಕೇಂದ್ರ ಸರ್ಕಾರದ ಹೊಸ ನೀತಿ ಮತ್ತು ಕಾರ್ಯಕ್ರಮಗಳ ಪ್ರಯೋಗಶಾಲೆಯಾಗಿದೆ.

ಭಾಗ:-2
ಕರ್ನಾಟಕವು ತಮಿಳುನಾಡಿನಂತೆಯೇ ಭಾಷಾ ನೀತಿ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ಹಣಕಾಸು ಹಂಚಿಕೆ, ಶಾಸಕಾಂಗದ ಸ್ವಾಯತ್ತತೆ ಮುಂತಾದ ಕ್ಷೇತ್ರಗಳಲ್ಲಿ ರಾಜ್ಯಗಳ ಸಾಂವಿಧಾನಿಕ ಪಾತ್ರವನ್ನು ದೃಢವಾಗಿ ಪ್ರತಿಪಾದಿಸುತ್ತಾ ಬಂದಿವೆ. ಇವು ಕೇವಲ ಪ್ರಾದೇಶಿಕ ಹಕ್ಕುಗಳಲ್ಲ; ಇವು ಸಾಂವಿಧಾನಿಕ ಹಕ್ಕುಗಳು. ಬಹುತ್ವ, ವೈವಿಧ್ಯತೆ ಮತ್ತು ಪ್ರಜಾಪ್ರಭುತ್ವದ ಹೊಣೆಗಾರಿಕೆಯ ಮೇಲಿನ ತಾತ್ವಿಕ ಬದ್ಧತೆಯಿಂದ ಇವು ಸ್ಥಾಪಿತಗೊಂಡಿದೆ.

ಈ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ರಚನಾತ್ಮಕ ಒಕ್ಕೂಟ ವ್ಯವಸ್ಥೆಯ ಸಂವಾದದಲ್ಲಿ ಭಾಗಿಯಾಗಬೇಕು ಎನ್ನುವುದು ನನ್ನ ಸ್ಪಷ್ಟ ಅಭಿಪ್ರಾಯವಾಗಿದೆ. ಒಕ್ಕೂಟ ವ್ಯವಸ್ಥೆಯ ಬಲವರ್ಧನೆಯ ಕೆಲಸ ಒಂದೆರಡು ರಾಜ್ಯಗಳ ಏಕಾಂಗಿ ಪ್ರಯತ್ನವಾಗಿರಬಾರದು; ಅದು ಸಾಮೂಹಿಕ ಧ್ವನಿಯಾಗಿ ಹೊರಹೊಮ್ಮಬೇಕು. ನಿಮ್ಮ ಪತ್ರದಲ್ಲಿ ಒತ್ತಿ ಹೇಳಿದಂತೆ, ಇದರ ಉದ್ದೇಶವು ಒಕ್ಕೂಟವನ್ನು ದುರ್ಬಲಗೊಳಿಸುವುದಲ್ಲ, ಬದಲಿಗೆ ಹೊಣೆಗಾರಿಕೆಯನ್ನು ದೃಡೀಕರಿಸಿಕೊಳ್ಳುವುದು, ದೇಶದ ಶಕ್ತಿಯನ್ನು ನಿಜವಾದ ರಾಷ್ಟ್ರೀಯ ಆದ್ಯತೆಗಳ ಮೇಲೆ ಕೇಂದ್ರೀಕರಿಸುವುದು ಮತ್ತು ರಾಜ್ಯಗಳಿಗೆ ಸಾಂವಿಧಾನಿಕವಾಗಿ ವಹಿಸಲಾದ ಕಾರ್ಯಗಳಲ್ಲಿ ವಿಶ್ವಾಸ ಇಡುವುದಾಗಿದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಈ ವಿಷಯಗಳ ಮೇಲೆ ಚರ್ಚಿಸಲು ಸಾಂಸ್ಥಿಕ ವೇದಿಕೆಯನ್ನು ಒದಗಿಸುವುದು ಅಗತ್ಯವಾಗಿದೆ. ಅನುಚ್ಛೇದ 263ರ ಅಡಿಯಲ್ಲಿ ಬರುವ ಅಂತರ್-ರಾಜ್ಯ ಮಂಡಳಿಯ ಪುನಶ್ಚೇತನ, ಮುಖ್ಯಮಂತ್ರಿಗಳ ವಿಶೇಷ ಸಭೆ, ಅಥವಾ ಸಾಂವಿಧಾನಿಕ ಆಶಯದಡಿ ಸಂವಿಧಾನವನ್ನು ಪರಿಶೀಲನೆಗೊಳಪಡಿಸಲು ಒಂದು ರಚನಾತ್ಮಕ ವೇದಿಕೆ ಇವುಗಳಲ್ಲಿ ಯಾವುದಾದರೂ ಒಂದರ ಮೂಲಕ ರಾಜ್ಯಗಳು ತಮ್ಮ ಶಿಫಾರಸುಗಳನ್ನು ಔಪಚಾರಿಕವಾಗಿ, ಪಾರದರ್ಶಕವಾಗಿ ಮತ್ತು ಚರ್ಚಾತ್ಮಕವಾಗಿ ಮಂಡಿಸಬಹುದಾದ ವೇದಿಕೆಯನ್ನು ಒಕ್ಕೂಟವು ಸೃಷ್ಟಿಸಬೇಕು. ಈ ರೀತಿ ರಾಜ್ಯಗಳ ದನಿಗೆ ಕಿವಿಗೊಡದೆ ಇದ್ದರೆ, ಅವುಗಳ ಅಭಿಪ್ರಾಯ ಮಂಡನೆಗೆ ಅವಕಾಶ ಇಲ್ಲದೆ ಹೋದೆ ಸಹಕಾರಿ ಒಕ್ಕೂಟ ವ್ಯವಸ್ಥೆಯು ಕೇವಲ ಹಾಳೆಗಳಿಗೆ ಸೀಮಿತವಾಗಲಿದೆ.

ಪ್ರಬುದ್ಧ ವ್ಯವಸ್ಥೆಯು ಏಕಪಕ್ಷೀಯ ನಿರ್ಣಯಗಳಿಗಿಂತ ಸಂಧಾನ ಮಾತುಕತೆಯ ಮೂಲಕ ಕೈಗೊಳ್ಳುವ ಒಪ್ಪಿತ ತೀರ್ಮಾನಗಳ ಮೇಲೆ ನಿಂತಿರುತ್ತದೆ. ಭಾರತದಂತಹ ವೈವಿಧ್ಯಮಯ ಗಣರಾಜ್ಯದ ಏಕತೆಯು ಏಕರೂಪತೆಯಿಂದಲ್ಲ, ಸಂವಿಧಾನದ ಮೇಲಿನ ನಂಬಿಕೆಯಿಂದ ಉಳಿಯುತ್ತದೆ. ನಮ್ಮ ಒಕ್ಕೂಟ ಒಪ್ಪಂದವು ಪದಾನುಕ್ರಮದ ಮೇಲ್ವಿಚಾರಣೆಯಿಂದ ಸಹಯೋಗಿ ಪಾಲುದಾರಿಕೆಗೆ; ಕೇಂದ್ರ ಪ್ರಾಬಲ್ಯದಿಂದ ಸಮನ್ವಯಿತ ಬಹುತ್ವಕ್ಕೆ; ಸ್ಪರ್ಧಾತ್ಮಕ ಅಹವಾಲುಗಳಿಂದ ಸಾಮೂಹಿಕ ಆಡಳಿತಕ್ಕೆ ವಿಕಸನಗೊಳ್ಳಬೇಕು.

ಸಾಂವಿಧಾನಿಕ ತತ್ವಗಳಲ್ಲಿ ಅಡಕವಾಗಿರುವ ಈ ಅಂಶದ ಬಗೆಗೆ ಕೂಲಕಂಷ ಪರಿಶೀಲನೆ ನಡೆಸಿರುವ ತಮಿಳುನಾಡು ಸರ್ಕಾರಕ್ಕೆ ಮತ್ತು ಉನ್ನತ ಮಟ್ಟದ ಸಮಿತಿಯ ಗೌರವಾನ್ವಿತ ಸದಸ್ಯರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು.

ಕೇಂದ್ರ-ರಾಜ್ಯಗಳ ಸಂಬಂಧಗಳಲ್ಲಿ ಸಮತೋಲನವನ್ನು ಮರುಸ್ಥಾಪಿಸುವ ಅರ್ಥಪೂರ್ಣ ರಾಷ್ಟ್ರೀಯ ಸಂವಾದವನ್ನು ಮುಂದುವರಿಸಲು ಕರ್ನಾಟಕವು ತಮಿಳುನಾಡು ಹಾಗೂ ಇತರ ರಾಜ್ಯಗಳೊಂದಿಗೆ ರಚನಾತ್ಮಕವಾಗಿ ಸಹಕರಿಸಲು ಸಿದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

 
Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸತ್ಯ ಧರ್ಮದ ದೀಪಗಳು ಹೊಳೆದಂತೆ ಅಬ್ದುಲ್ ಜಬ್ಬಾರ್ ಅಮಾನತು ಹಿಂಪಡೆಯುವ ಬಗ್ಗೆ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ; ಸಿಎಂ ವಿರುದ್ಧ ಕೆ.ಎನ್. ರಾಜಣ್ಣ ಅಸಮಾಧಾನದ ಸ್ಫೋಟ!ಶಾಖಾಧಿಕಾರಿ ಹಾಗೂ ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ಅರ್ಜಿ ಆಹ್ವಾನ ಮೂರೇ ನಿಮಿಷದಲ್ಲಿ ಜ್ಯುವೆಲರಿ ಶಾಪ್ ದರೋಡೆ; ಮಾಲೀಕ ಶೌಚಾಲಯಕ್ಕೆ ಹೋದಾಗ ಕೈಚಳಕ ತೋರಿದ ಖದೀಮರು!ಮನೆಯೊಳಗೆ ನುಗ್ಗಿದ ಚಿರತೆ; ಮಂಚದ ಕೆಳಗೆ ಅವಿತಿದ್ದ ಕಿರಾತಕನಿಂದ ವೃದ್ಧೆ ಪಾರು!"ನಮಗೂ ಪ್ರಧಾನಿಗೂ ಹೆಂಡತಿ ಸಮಸ್ಯೆ ಇಲ್ಲ": ಸಂಸತ್ತಿನಲ್ಲಿ ರಾಹುಲ್ ಗಾಂಧಿ ಲಘು ಧಾಟಿಯ ವಾಗ್ದಾಳಿಮುಖಾಮುಖಿ ಡಿಕ್ಕಿ: ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಆರು ಮಂದಿ ದುರ್ಮರಣಜಬ್ಬಾರ್ ಅಮಾನತು ಹಿಂಪಡೆಯುವಂತೆ ಜಾರಕಿಹೊಳಿ ಮನವಿ: ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ-ಶಿವಕುಮಾರ್ ಮಹಿಳಾ ಮೀಸಲಾತಿ ಕಾಯ್ದೆ-2023 ಅಧಿಕೃತ ಜಾರಿ: ಕೇಂದ್ರ ಸರ್ಕಾರದಿಂದ ಅಧಿಸೂಚನೆ ಪ್ರಕಟ