ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ಐತಿಹಾಸಿಕ ಅತಿಥಿ ಗೃಹದ ಬೃಹತ್ ಕಲ್ಲಿನ ಕಟ್ಟಡ ಇನ್ಮುಂದೆ ಡಿ.ಕೆ. ಶಿವಕುಮಾರ್ ಅವರ ತಾತ್ಕಾಲಿಕ ಆವಾಸಸ್ಥಾನವಾಗಲಿದೆ. ಈಗಾಗಲೇ ಈ ಸ್ಥಳಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಿದ್ಧತೆಗಳನ್ನು ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರ 'ಕಾವೇರಿ'ಗೆ ಸದ್ಯಕ್ಕೆ ಮುಂಜಾಗ್ರತೆ:
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ವಾಸಿಸುತ್ತಿರುವ ಅಧಿಕೃತ ನಿವಾಸ 'ಕಾವೇರಿ'ಯನ್ನು ತಕ್ಷಣವೇ ಖಾಲಿ ಮಾಡುವಂತೆ ಕೇಳದಿರಲು ಡಿ.ಕೆ. ಶಿವಕುಮಾರ್ ತೀರ್ಮಾನಿಸಿದ್ದಾರೆ. ಹಿರಿಯ ನಾಯಕರ ಭಾವನೆಗಳಿಗೆ ಧಕ್ಕೆ ಬಾರದಂತೆ ಗೌರವಯುತವಾಗಿ ನಡೆದುಕೊಳ್ಳುವ ನಿಟ್ಟಿನಲ್ಲಿ ಡಿಕೆಶಿ ಈ ರಾಜತಾಂತ್ರಿಕ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
'ಕೃಷ್ಣಾ'ದಲ್ಲೇ ಜನತಾ ದರ್ಶನ:
ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ 'ಕೃಷ್ಣಾ' ಎಂದಿನಂತೆ ಸಾರ್ವಜನಿಕರ ಸೇವೆಗೆ ಮುಕ್ತವಾಗಿರಲಿದೆ. ಪ್ರಮುಖ ಆಡಳಿತಾತ್ಮಕ ಸಭೆಗಳು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುವ 'ಜನತಾ ದರ್ಶನ' ಕಾರ್ಯಕ್ರಮಗಳನ್ನು ಕೃಷ್ಣಾ ಗೃಹ ಕಚೇರಿಯಲ್ಲೇ ನಡೆಸಲು ನಿಯೋಜಿತ ಸಿಎಂ ಚಿಂತನೆ ನಡೆಸಿದ್ದಾರೆ.



