Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬರಪೀಡಿತ ಎಂದು ಘೋಷಿಸಿ, ಕೃಷಿ ಸಾಲ ಮನ್ನಾ ಮಾಡಿ: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ

Advertisement
Advertisement

ಚಂದ್ರವಳ್ಳಿ ನ್ಯೂಸ್, ​ಬಾಗಲಕೋಟೆ:
ರಾಜ್ಯದಲ್ಲಿ ತಲೆದೋರಿರುವ ನೆರೆ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಪ್ರಮುಖರ ಅಧ್ಯಯನ ತಂಡದೊಂದಿಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ, ಬೆಳೆ ಹಾನಿ ಪರಿಶೀಲಿಸಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ ರೈತರ ಸಾಲ ಮನ್ನಾ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

​ಜೆಡಿಎಸ್ ವತಿಯಿಂದ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ವಿಭಾಗಗಳ ನೆರೆ ಮತ್ತು ಬರ ಅಧ್ಯಯನ ತಂಡದೊಂದಿಗೆ ಬಾದಾಮಿ ಕ್ಷೇತ್ರದ ಹಲಕುರ್ಕಿ, ಕೊಂಕನಕೊಪ್ಪ, ಹಂಗರಗಿ ಹಾಗೂ ಖಾಜಿಬೂದಿಹಾಳ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಭೂಮಿಗೆ ಭೇಟಿ ನೀಡಿ ಅವರು ರೈತರ ಅಳಲನ್ನು ಆಲಿಸಿದರು.

​ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ರೈತರು:
​ಜಿಲ್ಲೆಯಲ್ಲಿ ಮಳೆಯಿಲ್ಲದೆ ರೈತರು ಬಿತ್ತನೆಯನ್ನೇ ಮಾಡಿಲ್ಲ. ಕೆಲವರು ಸಾಲ ಮಾಡಿ ಬಿತ್ತನೆ ಮಾಡಿದ್ದರೂ ಬೆಳೆಗಳು ಮಳೆ ಅಭಾವದಿಂದ ಸಂಪೂರ್ಣವಾಗಿ ಒಣಗಿ ಹೋಗುತ್ತಿವೆ. ಕುಡಿಯಲು ಮತ್ತು ಬೆಳೆಗೆ ನೀರಿಲ್ಲದೆ, ಸಾಲ ತೀರಿಸಲು ದಾರಿಯಿಲ್ಲದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ನಿಖಿಲ್ ಕಳವಳ ವ್ಯಕ್ತಪಡಿಸಿದ್ದಾರೆ.

​"ರೈತರ ಕಣ್ಣಿನಲ್ಲಿನ ಕಣ್ಣೀರು, ಮುಖದಲ್ಲಿನ ಆತಂಕ ಮತ್ತು ಅಸಹಾಯಕತೆ ನಮ್ಮೆಲ್ಲರ ಎದೆ ಕಲಕಿದೆ. ಅವರ ನೋವನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರ ಮಾತ್ರ ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಕುಳಿತಿರುವುದು ಅತ್ಯಂತ ದುರ್ದೈವದ ಸಂಗತಿ."
ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಮುಖಂಡ.

​ಸರ್ಕಾರಕ್ಕೆ ಜೆಡಿಎಸ್ ಮಂಡಿಸಿರುವ 3 ಪ್ರಮುಖ ಒತ್ತಾಯಗಳು
​ಬರಪೀಡಿತ ಪ್ರದೇಶ ಘೋಷಣೆ: ಕೂಡಲೇ ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ, ಬಾದಾಮಿ ಸೇರಿದಂತೆ ಇಡೀ ಬಾಗಲಕೋಟೆ ಜಿಲ್ಲೆಯನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.

​ಖಾತೆಗೆ ನೇರ ಹಣ ವರ್ಗಾವಣೆ: ಯಾವುದೇ ರೀತಿಯ ವಿಳಂಬವಿಲ್ಲದೆ ತಕ್ಷಣವೇ ಬರ ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು.

​ಸಂಪೂರ್ಣ ಸಾಲ ಮನ್ನಾ: ಸಂಕಷ್ಟದಲ್ಲಿರುವ ರೈತರ ಮೇಲಿನ ಕೃಷಿ ಸಾಲವನ್ನು ಸರ್ಕಾರ ಸಂಪೂರ್ಣವಾಗಿ ಮನ್ನಾ ಮಾಡಬೇಕು.

​ರಾಜ್ಯಪಾಲರಿಗೆ ಶೀಘ್ರ ವರದಿ ಸಲ್ಲಿಕೆ:
​ಜೆಡಿಎಸ್ ಅಧ್ಯಯನ ತಂಡವು ಸ್ಥಳದಲ್ಲೇ ಸಿದ್ಧಪಡಿಸಿರುವ ಕೃಷಿ ಹಾನಿಯ ಸಮಗ್ರ ವರದಿಯನ್ನು ಶೀಘ್ರದಲ್ಲಿಯೇ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು. ಅಲ್ಲದೆ, ರಾಜ್ಯಪಾಲರನ್ನೂ ಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕ ನೊಂದ ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುವುದಾಗಿ ನಿಖಿಲ್ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

​ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ ಕೃಷ್ಣಾರೆಡ್ಡಿ, ಶಾಸಕ ಶರಣಗೌಡ ಪಾಟೀಲ್ ಕಂದಕೂರ್, ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್, ಮುಖಂಡರಾದ ದೊಡ್ಡನಗೌಡ ಪಾಟೀಲ್ ನರಿಬೋಳ್, ಹನಮಂತಪ್ಪ ಮಾವಿನಮರದ, ಸಿ.ವಿ. ಚಂದ್ರಶೇಖರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.