ಚಂದ್ರವಳ್ಳಿ ನ್ಯೂಸ್, ಧಾರವಾಡ:
ಮಾಧ್ಯಮಗಳಲ್ಲಿ ಸ್ಟಿಂಗ್ ಆಪರೇಷನ್ ಪ್ರಸಾರವಾಗುವವರೆಗೆ ಈ ವಿಚಾರ ಸದ್ದು ಮಾಡಲಿದ್ದು, ಏಜೆನ್ಸಿಯವರು ನಿಮ್ಮ ಹಿಂದೆ ಇರುವುದರಿಂದ ಎಲ್ಲರೂ ಹುಷಾರಾಗಿರಬೇಕು ಎಂದು ಮುಖ್ಯಮಂತ್ರಿಗಳು ತಮಗೆ ಸೂಚನೆ ನೀಡಿದ್ದರು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಧಾರವಾಡದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಾದರೂ ನಮ್ಮ ಮುಂದೆ ಏನನ್ನಾದರೂ ಇಟ್ಟು ಟ್ರ್ಯಾಪ್ ಮಾಡಬಹುದು. ಕನ್ನಡಕದಲ್ಲಿ, ಗಡಿಯಾರದಲ್ಲಿ ಅಥವಾ ಉಂಗುರದಲ್ಲಿ ಗುಪ್ತ ಕ್ಯಾಮೆರಾ ಅಥವಾ ಸಾಧನಗಳ ಮೂಲಕ ಟ್ರ್ಯಾಪ್ ಮಾಡಬಹುದು, ಆದ್ದರಿಂದ ಎಚ್ಚರಿಕೆಯಿಂದಿರಿ ಎಂದು ಸಿಎಂ ಎಚ್ಚರಿಸಿದ್ದರು ಎಂದರು. ಪ್ರತಿದಿನ ನೂರಾರು ಜನರು ಭೇಟಿ ನೀಡುವುದರಿಂದ ಬರುವ ಪ್ರತಿಯೊಬ್ಬರ ಹಿನ್ನೆಲೆಯನ್ನು ಕಂಡುಹಿಡಿಯಲುಸಾಧ್ಯವಿಲ್ಲ, ಹೀಗಾಗಿ ನಾವೇ ಎಚ್ಚರದಿಂದಿರಬೇಕು ಎಂದು ಸ್ಪಷ್ಟಪಡಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಮತ್ತು ಅಭ್ಯರ್ಥಿ ಗೆಲುವಿನ ವಿಶ್ವಾಸ: ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿರುವ ಕುರಿತು ಮಾತನಾಡಿದ ಸಚಿವರು, ನಾಲ್ಕು ಜಿಲ್ಲೆಗಳ ಶಾಸಕರು ಒಟ್ಟಾಗಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಹೊತ್ತಿದ್ದೇವೆ ಎಂದರು. ಪದವೀಧರ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕೀಯ ಬೆಳವಣಿಗೆಗಳು ಮತ್ತು ರೈತ ಹೋರಾಟದ ಕುರಿತು ಪ್ರತಿಕ್ರಿಯೆ:
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅವರೆಲ್ಲರೂ ಒಂದೇ ಪಕ್ಷದವರಾಗಿದ್ದು, ಅವರ ಭೇಟಿಯಲ್ಲಿ ಯಾವುದೇ ವಿಶೇಷವಿಲ್ಲ ಎಂದರು. ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಮತ್ತು ಜಗಳವಿರುವುದು ಸಾಮಾನ್ಯ ಹಾಗೂ ಚುನಾವಣೆ ಬಂದಾಗ ಮತ್ತೆ ಒಂದಾಗುವುದು ಸಹಜ ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ, ರೈತರ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂಬ ಕೋಡಿಹಳ್ಳಿ ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ಯಾರ ವೈಯಕ್ತಿಕ ಪರವೂ ಇಲ್ಲ, ನ್ಯಾಯಸಮ್ಮತವಾಗಿರುವುದಕ್ಕೆ ಮಾತ್ರ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಜಿಲ್ಲಾಡಳಿತ ರೈತರ ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟಿದೆ. ಮುಂಬರುವ ಅಕ್ಟೋಬರ್ 26ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಅಂದು ಕಬ್ಬು ಬೆಳೆಗಾರರು ಮತ್ತು ನಾವೆಲ್ಲರೂ ಸೇರಿ ಸಭೆ ನಡೆಸಲಿದ್ದೇವೆ. ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.



