ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೆಳಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಶೀಘ್ರದಲ್ಲೇ ಬಿಗ್ ರಿಲೀಫ್ ಸಿಗಲಿದೆ. ಹಳೆಯ ಕಾಲದ ಲೋಹದ (ಮೆಟಲ್) ವಿಸಿಲ್ ಚೈನ್ ಹಾಗೂ ಮೆಟಲ್ ಬಟನ್‌ಗಳ ಬದಲಾಗಿ, ನೂತನ 'ವಿಸಿಲ್ ಗಾರ್ಡ್' ಮತ್ತು 'ಮ್ಯಾಟ್ ಫಿನಿಶ್ ಬಟನ್'ಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಬುಧವಾರ ನಗರದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಈ ಮಹತ್ವದ ಘೋಷಣೆ ಮಾಡಿದರು.
ಬದಲಾವಣೆಗೆ ಕಾರಣವೇನು?:
ಈ ಹಿಂದೆ ಬ್ರಿಟಿಷರ ಕಾಲದಿಂದಲೂ ಬಳಕೆಯಲ್ಲಿದ್ದ ಸ್ಲೋಚ್ ಕ್ಯಾಪ್‌ಗಳು ಬೇಸಿಗೆಯಲ್ಲಿ ಸಿಬ್ಬಂದಿಗೆ ತೀವ್ರ ಅಸ್ವಸ್ಥತೆ ಉಂಟುಮಾಡುತ್ತಿದ್ದವು. ಹೀಗಾಗಿ ಇತರ ರಾಜ್ಯಗಳ ಮಾದರಿಯನ್ನು ಪರಿಶೀಲಿಸಿ ನೇವಿ ಬ್ಲೂ ಬಣ್ಣದ ಪೀಕ್ ಕ್ಯಾಪ್‌ಗಳನ್ನು ನೀಡಿ ಇತ್ತೀಚೆಗೆ ಐತಿಹಾಸಿಕ ಬದಲಾವಣೆ ತರಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಸಮವಸ್ತ್ರದಲ್ಲಿರುವ ಮೆಟಲ್ ಚೈನ್ ಹಾಗೂ ಬಟನ್‌ಗಳನ್ನೂ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.
ಪ್ರಸ್ತುತ ಬಳಸಲಾಗುತ್ತಿರುವ ಲೋಹದ ಚೈನ್ ಮತ್ತು ಬಟನ್‌ಗಳು ಹವಾಮಾನ ವೈಪರೀತ್ಯ ಹಾಗೂ ಮಳೆ-ಬಿಸಿಲಿಗೆ ಶೀಘ್ರವಾಗಿ ತುಕ್ಕು ಹಿಡಿಯುತ್ತಿದ್ದವು. ಇದರಿಂದ ಸಮವಸ್ತ್ರ ಹಾಳಾಗುವುದು ಮಾತ್ರವಲ್ಲದೆ, ಸಿಬ್ಬಂದಿಗೆ ಚರ್ಮದ ಅಲರ್ಜಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದವು.
ಇತರ ರಾಜ್ಯಗಳಲ್ಲಿ ಈಗಾಗಲೇ ಜಾರಿ:
ಸಿಬ್ಬಂದಿಯ ಈ ಸಮಸ್ಯೆಯನ್ನು ಗಮನಿಸಿದ ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ದೆಹಲಿ ಹಾಗೂ ಸಿಕ್ಕಿಂ ಸೇರಿದಂತೆ ದೇಶದ ಹಲವು ರಾಜ್ಯಗಳು ಈಗಾಗಲೇ ಖಾಕಿ ಅಥವಾ ನೀಲಿ ಬಣ್ಣದ ವಿಸಿಲ್ ಗಾರ್ಡ್ ಹಾಗೂ ಪಾಲಿಶ್ಡ್ ಮ್ಯಾಟ್ ಫಿನಿಶ್ ಬಟನ್‌ಗಳನ್ನು ಅಳವಡಿಸಿಕೊಂಡಿವೆ. ಜೊತೆಗೆ, ಅರಣ್ಯ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗೂ ಈ ಸೌಲಭ್ಯ ಕಲ್ಪಿಸಲಾಗಿದೆ.
ಸುದೀರ್ಘ ಹೋರಾಟಕ್ಕೆ ಫಲ: ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ ಅವರು, ಇತರ ರಾಜ್ಯಗಳ ಪೊಲೀಸ್ ಸಮವಸ್ತ್ರಗಳ ಭಾವಚಿತ್ರಗಳೊಂದಿಗೆ ಗೃಹ ಇಲಾಖೆ ಹಾಗೂ ಪೊಲೀಸ್ ಡಿಜಿ-ಐಜಿಪಿ ಅವರಿಗೆ ಸುದೀರ್ಘ ಮನವಿ ಸಲ್ಲಿಸಿ ಈ ಬದಲಾವಣೆಗೆ ಒತ್ತಾಯಿಸುತ್ತಿದ್ದರು.
ಈ ಕುರಿತು ಸಂತಸ ಹಂಚಿಕೊಂಡ ಅವರು, "ಪ್ರಸ್ತುತ ಜಾರಿಯಲ್ಲಿರುವ ನೇವಿ ಬ್ಲೂ ಪೀಕ್ ಕ್ಯಾಪ್‌ಗೆ ಹೊಂದುವಂತಹ ವಿಸಿಲ್ ಗಾರ್ಡ್ ಹಾಗೂ ಮ್ಯಾಟ್ ಫಿನಿಶ್ ಬಟನ್‌ಗಳನ್ನು ನೀಡುವಂತೆ ನಾವು ಮನವಿ ಮಾಡಿದ್ದೆವು. ಸಿಬ್ಬಂದಿಯ ಆರೋಗ್ಯ ಮತ್ತು ಹಿತದೃಷ್ಟಿಯಿಂದ ನಮ್ಮ ಮನವಿಯನ್ನು ಪುರಸ್ಕರಿಸಿ, ನೂತನ ವಿಸಿಲ್ ಗಾರ್ಡ್ ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ" ಎಂದು ತಿಳಿಸಿದ್ದಾರೆ.



