ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸಾರ್ವಜನಿಕವಾಗಿ ಗಣೇಶ ಚತುರ್ಥಿಯನ್ನು ಸಂಪ್ರದಾಯ ಬದ್ದವಾಗಿ ಸಂಭ್ರಮದಿಂದ ಆಚರಣೆ ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ಗಣೇಶ ಪ್ರತಿಷ್ಟಾಪನೆ ಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಸರ್ಕಾರದ ಸೂಚನೆಯಂತೆ ಡಿ.ಜೆ ಬಳಸಲು ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಡಿವೈಎಸ್‌ಪಿ ಪಾಂಡುರಂಗ.ಎಸ್ ಹೇಳಿದ್ದಾರೆ.
ನಗರದ ಖಾಸಗಿ ಕಲ್ಯಾಣ ಮಂದಿರದಲ್ಲಿ ಪೊಲೀಸ್‌ಇಲಾಖೆ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗದಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನತೆ ಒಗ್ಗಟ್ಟು ಹಾಗೂ ಸಾಮರಸ್ಯ ಪ್ರದರ್ಶಿಸಲು ಸಾರ್ವಜನಿಕ ಗಣೇಶೋತ್ಸವ ಆಚರಣೆ ಆರಂಭವಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಗಣೇಶೋತ್ಸವದ ವೇಳೆ ಅವಘಡಗಳಾಗಿ, ಸಾವು ನೋವುಗಳಾಗುತ್ತಿರುವುದು ದುರಂತದ ವಿಚಾರ. ಕಳೆದ ವರ್ಷ ಮುತ್ತೂರಿನ ಪಟಾಕಿ ದುರಂತ, ಸೇರಿದಂತೆ ವಿವಿದೆಡೆ ಸಾವು ನೋವುಗಳಾಗಿವೆ.
ಈ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದುಕೊಳ್ಳುವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸುವುದು ಕಡ್ಡಾಯವಾಗಿದೆ. ಹೆಚ್ಚು ಡೆಸಿಬಲ್‌ಇಲ್ಲದ ನಿಯಮಾನುಸಾರವಿರುವ ಧ್ವನಿ ವರ್ಧಕಗಳಿಗೆ ಮಾತ್ರ ಅನುಮತಿ ನೀಡಿದೆ. ಡಿ.ಜೆಗೆ ಅನುಮತಿ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಇದನ್ನು ಯಾರೂ ನಂಬಬಾರದು. ಇಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದಾತ್ಮಕ ಸಂದೇಶಗಳು ಸುಳ್ಳು ಸುದ್ದಿಗಳು ಹರಡಬಾರದು. ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಬಾರದು. ಯಾರೇ ಆಗಲಿ ನಿಯಮ ಉಲ್ಲಂಘಿಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಮಾಂತರ ಪೊಲೀಸ್‌ಠಾಣೆಯ ಇನ್ಸ್ಪೆಕ್ಟರ್‌ಎಂ.ಬಿ.ನವೀನ್‌ಕುಮಾರ್ ಮಾತನಾಡಿ, ಗಣೇಶ ಪ್ರತಿಷ್ಟಾಪನೆಗೆ ಅನುಮತಿ ನೀಡಲು ಏಕ ಗವಾಕ್ಷಿ ವ್ಯವಸ್ಥೆ ಮಾಡಿದ್ದು, ಸೆ.13ರೊಳಗಾಗಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರತಿಷ್ಟಾಪನೆಗೆ 5 ದಿನಗಳಿಗೆ ಮಾತ್ರ ಅನುಮತಿಯಿದ್ದು, 4 ಅಡಿ ಮೀರದಂತೆ ಗಣೇಶ ಕೂಡಿಸಬೇಕಿದೆ. ಕೂಡಿಸುವ ಜಾಗಕ್ಕೆ ಸಂಬಂಧಪಟ್ಟವರ ಅನುಮತಿ ಕಡ್ಡಾಯವಾಗಿದೆ. ರಸ್ತೆ ಸಂಚಾರಕ್ಕೆ ಅಡಚಣೆಯಾಗದಂತೆ ಶೆಡ್ ಅಥವಾ ಪೂಜಾ ಸ್ಥಳ ನಿರ್ಮಿಸಿಕೊಳ್ಳಬೇಕಿದೆ. ಧ್ವನಿ ವರ್ಧಕ ಅನುಮತಿ ಪತ್ರ , ಬೆಸ್ಕಾಂ ಇಲಾಖೆಯಿಂದ ಅನುಮತಿ ಪತ್ರ ತಪ್ಪದೇ ಪಡೆಯುವುದು. ಸಂಜೆ 6 ಗಂಟೆಯೊಳಗೆ ಗಣೇಶ ವಿಸರ್ಜನೆಯನ್ನು ಮಾಡಬೇಕು. ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ನಿಗದಿಪಡಿಸಿದ ವಿಸರ್ಜನೆ ಸ್ಥಳದಲ್ಲಿಯೇ ವಿಸರ್ಜಿಸಬೇಕು. ಗಣೇಶ ವಿಸರ್ಜನೆ ಸಮಯದಲ್ಲಿ ನುರಿತ 4 ಜನ ಈಜುಗಾರರನ್ನು ವಿಸರ್ಜಿಸಲು ನೇಮಕಮಾಡತಕ್ಕದ್ದು, ಈ ಈಜುಗಾರರೂ ಸಹ ಮದ್ಯ ಸೇವನೆ ಮಾಡಬಾರದು. ಆಹಾರ ಸುರಕ್ಷತೆ ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಿದ್ದು ಒಂದು ವೇಳೆ ಉಲ್ಲಂಘನೆ ಕಂಡಬಂದಲ್ಲಿ ಇಲಾಖೆ ವತಿಯಿಂದ ನೀಡಿರುವ ಅನುಮತಿಯೂ ರದ್ದುಪಡಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್‌ಮಲ್ಲಪ್ಪ.ಕೆ.ಯರಗೋಳ ಮಾತನಾಡಿ, ಗಣೇಶ ಪ್ರತಿಷ್ಟಾಪನೆಗೆ ಅನುಸರಿಸಬೇಕಾದ ನಿಯಮಗಳನ್ನು ಪಾಲಿಸಬೇಕು. ಯಾವುದೇ ಅನಾಹುತಗಳಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಎಫ್.ಐ.ಆರ್ ದಾಖಲಾದರೆ ಅದು ಮುಂದಿನ ಭವಿಷ್ಯಕ್ಕೆ ಮಾರಕವಾಗಲಿದೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು ಎಂದರು.
ಸಭೆಯಲ್ಲಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ಬೆಸ್ಕಾಂ, ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದಂತೆ ಗಣೇಶ ಪ್ರತಿಷ್ಟಾಪನೆಯ ಸಂಘಟಕರು, ಸಾರ್ವಜನಿಕರು ಭಾಗವಹಿಸಿದ್ದರು.




