ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಯೋಜನೆ ಮತ್ತು ಸಾಂಖಿಕ ಇಲಾಖೆಯ ಸಚಿವರಾದ ಡಿ. ಸುಧಾಕರ್ ಚಳ್ಳಕೆರೆ, ಅವರು ನಿಧನರಾದ ವಿಚಾರ ತಿಳಿದು ವಿಷಾದವಾಯಿತು. ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅನುಭವ ಹೊಂದಿದ್ದ ಅವರು ಶಾಸಕರಾಗಿ, ಸಚಿವರಾಗಿ ಉತ್ತಮ ಸೇವೆ ಮಾಡಿರುತ್ತಾರೆ.
ಶ್ರೀಕ್ಷೇತ್ರ ಧರ್ಮಸ್ಥಳದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದು ಅನೇಕ ಬಾರಿ ಇಲ್ಲಿಗೆ ಬಂದು ದೇವರ ದರ್ಶನವನ್ನು ಪಡೆದು ನನ್ನೊಂದಿಗೆ ಹೆಚ್ಚು ಕಾಲ ಮಾತುಕತೆ ನಡೆಸಿ ಹೋಗುತ್ತಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಬಂದ ಸಂದರ್ಭದಲ್ಲಿ ನಮ್ಮ ಆನೆ ಮರಿ ‘ಶಿವಾನಿ’ಯ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿರುವುದು ನನಗೆ ಇನ್ನೂ ಸ್ಮರಣೆಯಲ್ಲಿದೆ.
ಸರಕಾರವು ತಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿ ಜನಾನುರಾಗಿಯಾಗಿದ್ದ ಅವರು ಪಕ್ಷದ ವರಿಷ್ಠರೊಂದಿಗೆ ಸೌಹಾರ್ದಯುತ ಸಂಪರ್ಕವನ್ನು ಇಟ್ಟುಕೊಂಡು ತಮ್ಮ ಕ್ಷೇತ್ರದಲ್ಲಿ ಉತ್ತಮ ಸೇವಾಕಾರ್ಯಗಳನ್ನು ಮಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ.
ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಮಿತಿಯ ಸಭೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುತ್ತಿದ್ದ ಅವರು, ಮಸ್ತಕಾಭಿಷೇಕದ ಯಶಸ್ಸಿಗೆ ಸಕ್ರಿಯ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದರು.
ಅಲ್ಪಕಾಲದ ಅನಾರೋಗ್ಯದಿಂದ ಅಗಲಿದ ಡಿ. ಸುಧಾಕರ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ ಹಾಗೂ ಕುಟುಂಬಸ್ಥರಿಗೆ ಅವರ ಅಗಲುವಿಕೆಯಿಂದ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಶ್ರೀ ವಿರೇಂದ್ರ ಹೆಗಡೆಯವರು ಸಂತಾಪ ಸೂಚಿಸಿದ್ದಾರೆ


