ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ರಾಜ್ಯದ ಕಾಂಗ್ರೆಸ್ ಸರ್ಕಾರವು ಅಸಮರ್ಪಕ ಒಳಮೀಸಲಾತಿ ಹಂಚಿಕೆ ಮಾಡುವ ಮೂಲಕ ಪರಿಶಿಷ್ಟ ಜಾತಿಯಲ್ಲಿ ಅತೀ ಶೋಷಿತ ಹಾಗೂ ಹಿಂದುಳಿದ ದೊಡ್ಡ ಸಮುದಾಯವಾದ ಮಾದಿಗ ಸಮುದಾಯಕ್ಕೆ ನೇರವಾಗಿ ಮೋಸ ಮಾಡಿದೆ ಎಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕೆ.ಪಿ ಶ್ರೀನಿವಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿರಿಯೂರಿನಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ತಾಲ್ಲೂಕು ಸಮಿತಿಯಿಂದ ಆಯೋಜಿಸಲಾಗಿದ್ದ ಉಪಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ: "ಸುಮಾರು 3 ವರ್ಷಗಳು ಕಳೆದರೂ ಬಡವರಿಗೆ ಒಂದು ಮನೆಯನ್ನೂ ನೀಡಿಲ್ಲ. ತಾಲ್ಲೂಕಿನಲ್ಲಿ ರಸ್ತೆ, ಚರಂಡಿಗಳ ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ಅವಸರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತೇವೆಂದು ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಂದ ದಿಢೀರ್ ಆಗಿ ಅಭಿವೃದ್ಧಿ ಕೆಲಸಗಳ ಭೂಮಿ ಪೂಜೆ ಮಾಡಿಸುತ್ತಿರುವುದು ಕೇವಲ ಗಿಮಿಕ್. ಹಿರಿಯೂರಿನಲ್ಲಿ ಹಣದ ಹೊಳೆಯನ್ನೇ ಹರಿಸಿ ಅಕ್ರಮವಾಗಿ ಗೆಲ್ಲಲು ಆಡಳಿತ ಪಕ್ಷ ಯತ್ನಿಸುತ್ತಿದೆ" ಎಂದು ಶ್ರೀನಿವಾಸ್ ಆರೋಪಿಸಿದರು.
ಬಿಎಸ್ಪಿ ಸಜ್ಜು – ಜಗದೀಶ್ ಅಬ್ಬಿನಹೊಳೆ:
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಗದೀಶ್ ಅಬ್ಬಿನಹೊಳೆ, "ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ರಾಜಕಾರಣದ ಮಧ್ಯೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತ ಹಾಗೂ ಮಾನ್ಯ ಕಾನ್ಷೀರಾಂ ಅವರ ವಿಚಾರಧಾರೆಯಡಿ ಸಾಮಾಜಿಕ ಮತ್ತು ಒಳಮೀಸಲಾತಿ ಹೋರಾಟಗಾರರಾದ ಕೆ.ಪಿ. ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಲು ಬಹುಜನ ಸಮಾಜ ಪಾರ್ಟಿ ಸಂಪೂರ್ಣವಾಗಿ ಸಜ್ಜಾಗಿದೆ" ಎಂದರು.
ಹೊಸ ಪದಾಧಿಕಾರಿಗಳ ನೇಮಕ: ಇದೇ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ್ ಕಾಟನಾಯಕನಹಳ್ಳಿ ಹಾಗೂ ಕಾರ್ಯದರ್ಶಿಗಳಾಗಿ ಹನುಮಂತರಾಯ G R ಗುಯಿಲಾಳು ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು: ಸಭೆಯಲ್ಲಿ ಜಿಲ್ಲಾ ಸಂಯೋಜಕ ಕೆ.ಪಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತರಾಯ ಬ್ಯಾಡರಹಳ್ಳಿ, ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗಪ್ಪ ಉಪ್ಪಳಗೆರೆ, ಹಿರಿಯೂರು ಉಸ್ತುವಾರಿ ರಾಘವೇಂದ್ರ ಈಶ್ವರಗೆರೆ, ತಾಲ್ಲೂಕು ಅಧ್ಯಕ್ಷ ಜಗದೀಶ್ ಎಂ, ಉಪಾಧ್ಯಕ್ಷ ಎಂ.ಡಿ. ಕೋಟೆ ಚಂದ್ರಣ್ಣ, ರಾಜು ದೇವರ ಕೊಟ್ಟ, ಕಾರ್ಯದರ್ಶಿಗಳಾದ ಕಾಂತರಾಜ್ ಕೋಡಿಹಳ್ಳಿ, ಕದುರಪ್ಪ ಶಿಡ್ಲಯನಕೋಟೆ, ಲಕ್ಷ್ಮಿಕಾಂತ್, ಸ್ವಾಮಿ ಹಾಗೂ ಮುಖಂಡ ಎಂ.ಡಿ. ಕೋಟೆ ಓಬಳೇಶ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.




