ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ, ರಾಷ್ಟ್ರಮಟ್ಟದಲ್ಲಿ ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಕಾಯ್ದೆ ಜಾರಿ ಮೊದಲಾಗಿ ದಲಿತರ ಹಕ್ಕುಗಳನ್ನು ಸಂರಕ್ಷಿಸಲು ಒತ್ತಾಯಿಸಿ, ದಲಿತ ಹಕ್ಕುಗಳ ಸಮಿತಿ ವತಿಯಿಂದ ಚಳಿಗಾಲದ ಅಧಿವೇಷನದ ಸಂಸತ್ ಚಲೋ ಸಹಿ ಸಂಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಅಧ್ಯಕ್ಷ ಗೋಪಾಲಕೃಷ್ಣ ಹರಳಹಳ್ಳಿ ಹೇಳಿದ್ದಾರೆ.
ನಗರದ ಸಿಪಿಎಂ ಕಾರ್ಯಾಲಯದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತ ಸಮುದಾಯದ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಘನತೆಯ ಬದುಕಿನ ಹಕ್ಕನ್ನು ಖಾತರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ದೇಶದಲ್ಲಿ ಇಂದಿಗೂ ದಲಿತರ ಮೇಲೆ ನಡೆಯುತ್ತಿರುವ ಜಾತಿ ತಾರತಮ್ಯ, ಅಸ್ಪೃಶ್ಯತೆ, ಜಾತಿ ಆಧಾರಿತ ದೌರ್ಜನ್ಯ ಹಾಗೂ ಸಾಮಾಜಿಕ ಅನ್ಯಾಯಗಳನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಎಲ್ಲಾ ಗ್ರಾಮಗಳಿಂದ ಸಹಿ ಸಂಗ್ರಹ ಚಳವಳಿಯನ್ನು ಹಮ್ಮಿಕೊಳ್ಳಲಾಗಿದ್ದು, ಸಹಿ ಸಂಗ್ರಹದ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗುವುದು ಎಂದರು.
ಹಕ್ಕೊತ್ತಾಯಗಳು :
ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ ಸರ್ವರಿಗೂ ಭೂಮಿ ನೀಡಿ, ಅಸ್ಪೃಶ್ಯತೆ, ಜಾತಿ ತಾರತಮ್ಯ, ದೌರ್ಜನ್ಯಗಳನ್ನು ತಡೆಗಟ್ಟಿ ಅಸಮಾನತೆಯನ್ನು ತೊಲಗಿಸಿ. ದಲಿತರ ಮೇಲೆ ಕೌಂಟರ್ಕೇಸ್ ಹಾಕುವುದನ್ನು ತಡೆಗಟ್ಟಿ ಬ್ಯಾಕ್ ಲಾಗ್ ಹುದ್ದೆಗಳನ್ನು ನೀಡಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಹೆಚ್ಚಿಸಿರುವ ಮೀಸಲಾತಿ ಶೇ.17 ಮತ್ತು ಶೇ.7 ಹೊರಗುತ್ತಿಗೆಯಲ್ಲಿ ಮೀಸಲು ಜಾರಿಯಾಗಬೇಕು. ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನದ 9ನೇ ಷೆಡ್ಯೂಲ್ಗೆ ಸೇರ್ಪಡೆ ಮಾಡಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು. ದಲಿತ ಯುವಕರಿಗೆ ಹೆಚ್ಚಿನ ಉದ್ಯೋಗಕ್ಕೆ ಅವಕಾಶ ನೀಡಬೇಕು. ಸರ್ಕಾರದಲ್ಲಿ ಖಾಲಿ ಇರುವ 2 ಲಕ್ಷ 84 ಸಾವಿರ ಹುದ್ದೆಗಳನ್ನು ತುಂಬಬೇಕು. ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ, ಹೊರಗುತ್ತಿಗೆ, ನೌಕರರನ್ನು ಖಾಯಂ ಮಾಡಬೇಕು ಮೀಸಲಾತಿ ಜಾರಿಯಾಗಬೇಕು. ಪಿ.ಟಿ.ಸಿ.ಎಲ್ ಕಾಯಿದೆ ಬಲಪಡಿಸಿ ಜಾರಿಗೆ ತರಬೇಕು. ದಲಿತರ ಭೂಮಿಗೆ ರಕ್ಷಣೆ ನೀಡಬೇಕು. ಅಕ್ರಮ ಸಕ್ರಮ ಕಾಯಿದೆ 94 ಸಿ ಗ್ರಾಮೀಣ ಪ್ರದೇಶದ ಮತ್ತು 94 ಸಿಸಿ ನಗರ ಪ್ರದೇಶ ಪ್ರಕಾರ ಮನೆಗಳ ಹಂಚಿಕೆ ಹಾಗೂ ಹಕ್ಕು ಪತ್ರ ನೀಡಬೇಕು. ಕೇಂದ್ರದಲ್ಲಿ ಬಿ.ಜೆ.ಪಿ. ಸರ್ಕಾರ ರಾಷ್ಟ್ರಮಟ್ಟದಲ್ಲಿ ಎಸ್.ಸಿ.ಎಸ್.ಪಿ / ಟಿ.ಎಸ್.ಪಿ ಕಾಯಿದೆ ಜಾರಿಗೆ ತರಬೇಕು. ಅನುದಾನ ಕಡಿತವಾಗದಂತೆ ನೀತಿ ಆಯೋಗದ ಯೋಜನೆಗಳನ್ನು ಜಾರಿಗೆ ತರಬೇಕು,
ಎಸ್.ಸಿ/ಎಸ್.ಟಿ ಹಾಸ್ಟೆಲ್ಗಳ ಉತ್ತಮ ನಿರ್ವಹಣೆ ಮಡಬೇಕು. ಎಸ್.ಸಿ/ಎಸ್.ಟಿ ದೌರ್ಜನ್ಯ ತಡೆಕಾಯ್ದೆ (ಪಿಒಎ) ಅನ್ನು ಬಲಪಡಿಸುವುದು. ಜಿಲ್ಲೆಗೊಂದು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು. ಅಂತರ್ಜಾತಿ ವಿವಾಹ ಬೆಂಬಲಿಸಿ ರಕ್ಷಣೆ ಉದ್ಯೋಗ ಭದ್ರತೆ ಒದಗಿಸಿ. ಕಾನೂನು ರೂಪಿಸಬೇಕು. ಮನ್ರೇಗಾ ಯೋಜನೆ ಮರು ಜಾಗಿ ಮಾಡಬೇಕು. ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನೀತಿಗಳಿಗೆ ಅಂತ್ಯ ಕಾಣಬೇಕು. ಕ್ರಿಶ್ಚಿಯನ್ ಮತ್ತು ಮುಸ್ಲಿಂ ದಲಿತರಿಗೆ ಮೀಸಲಾತಿ ಒದಗಿಸಬೇಕು. ನಿವೇಶನ, ವಸತಿ ಮತ್ತು ಭೂಮಿ ಇಲ್ಲದ ದಲಿತರಿಗೆ ಸ್ಮಶಾಣ ಭೂಮಿ ನೀಡಬೇಕು ಎನ್ನು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು.
ಸುದ್ಧಿಗೋಷ್ಟಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ಎಂ.ವೆಂಕಟರಾಜು, ಸಹ ಸಂಚಾಲಕ ಎಂ.ಮುನಿರಾಜು, ಜಿಲ್ಲಾ ಮುಖಂಡರಾದ ಮಂಜುನಾಥ,ಜಿ.ಎಸ್.ಮುನಿರಾಜು, ಈಶ್ವರಪ್ಪ ಹಾಜರಿದ್ದರು.




