ಚಂದ್ರವಳ್ಳಿ ನ್ಯೂಸ್, ಹಾಸನ:
ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ (ಕ್ರಷರ್) ಪರವಾನಗಿ ಹಾಗೂ ವಸತಿ ಬಡಾವಣೆಗಳ ಜಮೀನು ಅನ್ಯಕ್ರಾಂತ (ಅಲ್ಯುಲೇಷನ್) ಪ್ರಕ್ರಿಯೆಯಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಭಾನುವಾರ ಹಾಸನಾಂಬೆಯ ದರ್ಶನ ಪಡೆದ ಬಳಿಕ ಶಾಸಕ ಸ್ವರೂಪ ಪ್ರಕಾಶ್ ಅವರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ದಂದೆಯ ಹಿಂದಿರುವ ವಾಟ್ಸಾಪ್ ಚಾಟ್ ದಾಖಲೆಗಳನ್ನು ಮಾದ್ಯಮಗಳ ಮುಂದೆ ಬಹಿರಂಗಪಡಿಸಿದರು.
ವಾಟ್ಸಾಪ್ ಚಾಟ್ನಲ್ಲಿ ಭ್ರಷ್ಟಾಚಾರದ ಜಾಲ ಬಯಲು:
ಜಿಲ್ಲಾಧಿಕಾರಿ ಲತಾಕುಮಾರಿ ಅವರ ಆಪ್ತ ಸಹಾಯಕ ಎನ್ನಲಾದ ಶಶಿಕಿರಣ್ ಎಂಬ ವ್ಯಕ್ತಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದು, ಕ್ರಷರ್ ಹಾಗೂ ವಸತಿ ಬಡಾವಣೆ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದಾನೆ. ಈ ಹಣ ಜಿಲ್ಲಾಧಿಕಾರಿಗಳಿಗೆ ತಲುಪುತ್ತಿದೆ ಎಂಬುದು ವಾಟ್ಸಾಪ್ ಚಾಟ್ಗಳಿಂದ ಸ್ಪಷ್ಟವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಚಿವ ಶಿವಲಿಂಗೇಗೌಡರ ಮೇಲೂ ಗಂಭೀರ ಆರೋಪ:
ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಅವರಿಗೂ ದೊಡ್ಡ ಮಟ್ಟದ ಲಂಚದ ಹಣ ನೀಡಲಾಗಿದ್ದು, ಈ ಅಕ್ರಮದಲ್ಲಿ ಅವರೂ ಶಾಮೀಲಾಗಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. "ಪ್ರಾಮಾಣಿಕ ಅಧಿಕಾರಿಯೊಬ್ಬರು ಈ ವಾಟ್ಸಾಪ್ ಚಾಟ್ ದಾಖಲೆಗಳನ್ನು ನನಗೆ ತಲುಪಿಸಿದ್ದಾರೆ.
ವರ್ಗಾವಣೆ ತಡೆಯಲು ತಹಶೀಲ್ದಾರ್ ಸಂತೋಷ್ ಅವರ ಮೂಲಕ ಸಚಿವ ಶಿವಲಿಂಗೇಗೌಡರಿಗೆ 75 ಲಕ್ಷ ಲಂಚ ನೀಡಲಾಗಿದೆ ಎಂಬ ಆಘಾತಕಾರಿ ವಿಷಯ ಚಾಟ್ನಲ್ಲಿದೆ" ಎಂದು ಸಚಿವರು ಹೇಳಿದರು.
ಲಂಚದ ಹಣದ ಪಾಲು ಹಂಚಿಕೆ ಹೇಗೆ?:
ಕುಮಾರಸ್ವಾಮಿ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಲಂಚದ ಹಣದ ಹಂಚಿಕೆ ವಿವರ ಹೀಗಿದೆ:
60 ಲಕ್ಷದ ವ್ಯವಹಾರ: ಇದರಲ್ಲಿ 50 ಲಕ್ಷ ಜಿಲ್ಲಾಧಿಕಾರಿಗೆ ಹಾಗೂ ಬಾಕಿ ಹಣ DC ಆಪ್ತ ಸಹಾಯಕಿ ಸಹನಾ, ವಾಹನ ಚಾಲಕ, ಗನ್ಮ್ಯಾನ್ ಮತ್ತು ಸಿಬ್ಬಂದಿಗೆ ಹಂಚಿಕೆಯಾಗಿದೆ.
ಎಸಿ ಜಗದೀಶ್: 22 ಲಕ್ಷ ಲಂಚ ಪಡೆದಿರುವುದು ಉಲ್ಲೇಖವಾಗಿದೆ.
ತಹಶೀಲ್ದಾರ್ ಗೀತಾ: 13 ಲಕ್ಷ ಲಂಚ ಪಡೆದಿದ್ದಾರೆ ಎನ್ನಲಾಗಿದೆ.
ಡಿಸಿ ನಿವಾಸದ ಪೊಲೀಸ್ ರೂಮ್ನಲ್ಲಿ ಹಣ ಸಂಗ್ರಹ:
ಲಂಚದ ಹಣವನ್ನು ಸಿಸಿಟಿವಿ ಕ್ಯಾಮೆರಾಗಳ ಕಣ್ಣುತಪ್ಪಿಸಲು ಜಿಲ್ಲಾಧಿಕಾರಿ ನಿವಾಸದ ಗೇಟ್ ಬಳಿಯಿರುವ ಪೊಲೀಸ್ ರೂಮ್ನಲ್ಲಿ ಇಡಲು ವಾಟ್ಸಾಪ್ ಸಂದೇಶಗಳಲ್ಲಿ ಸೂಚಿಸಲಾಗುತ್ತಿತ್ತು. ಇತ್ತೀಚೆಗಷ್ಟೇ ಟ್ರ್ಯಾಪ್ ಆಗಿ ಅಮಾನತುಗೊಂಡಿದ್ದ ಅಧಿಕಾರಿಯೊಬ್ಬ ಮತ್ತೆ ಜಿಲ್ಲೆಗೆ ಬಂದು ಹಣ ವಸೂಲಿ ದಂದೆಯಲ್ಲಿ ನಿರತನಾಗಿದ್ದಾನೆ ಎಂದು ಹೆಚ್ಡಿಕೆ ಆರೋಪಿಸಿದರು.
"ಸಿಎಂ ಸಾಹೇಬ್ರೇ, ಈಗ ಯಾರಿಗೆ ದೂರು ನೀಡಬೇಕು?": ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಎಸೆದ ಕುಮಾರಸ್ವಾಮಿ, "ಯಾರಾದರೂ 10 ರೂಪಾಯಿ ಲಂಚ ಕೇಳಿದರೂ ತಮಗೆ ಕರೆ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಆದರೆ ಇಲ್ಲಿ ಇಡೀ ಜಿಲ್ಲಾಡಳಿತವೇ ಭ್ರಷ್ಟಾಚಾರದ ಕೂಪದಲ್ಲಿದೆ. ಬಡ ರೈತರು ತಮ್ಮ ಜಮೀನಿನ ಕಡತ ವಿಲೇವಾರಿಗೆ ಒಡವೆ ಮಾರಿ 50 ಲಕ್ಷ ಲಂಚ ಕೊಡುವ ದಾರುಣ ಸ್ಥಿತಿ ನಿರ್ಮಾಣವಾಗಿದೆ. ಈಗ ಹೇಳಿ ಮುಖ್ಯಮಂತ್ರಿಗಳೇ, ಇಂತಹ ಅಧಿಕಾರಿಗಳ ವಿರುದ್ಧ ದೂರು ನೀಡಲು ಯಾವ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕು?" ಎಂದು ತಾರಮಾರ್ ಆಗಿ ಪ್ರಶ್ನಿಸಿದರು.
ತಕ್ಷಣವೇ ತನಿಖೆಗೆ ಒತ್ತಾಯ: ವಾಟ್ಸಾಪ್ ಚಾಟ್ನಲ್ಲಿ ಹೆಸರು ಪ್ರಸ್ತಾಪವಾಗಿರುವ ಎಲ್ಲಾ ಅಧಿಕಾರಿಗಳ ಮೊಬೈಲ್ ಫೋನ್ಗಳನ್ನು ತಕ್ಷಣವೇ ಜಪ್ತಿ ಮಾಡಿ ಸಮಗ್ರ ತನಿಖೆಗೆ ಆದೇಶಿಸಬೇಕು. ಯಾವುದೇ ಕಾರಣಕ್ಕೂ ಇಂತಹ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಬಾರದು ಎಂದು ಸಚಿವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.




