ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ 'ನಾರಿ ನ್ಯಾಯ್' ಹಾಗೂ ಮಹಿಳಾ ಸಬಲೀಕರಣದ ಮಾತುಗಳು ಕೇವಲ ಬೂಟಾಟಿಕೆಯಿಂದ ಕೂಡಿದ್ದು, ಅಧಿಕಾರ ಬಂದಾಗ ಮಹಿಳೆಯರಿಗೆ ನಿರಂತರ ದ್ರೋಹ ಎಸಗಲಾಗುತ್ತಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್‌ಆಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿಲುವನ್ನು ಪ್ರಶ್ನಿಸಿರುವ ಅವರು, ಕಾಂಗ್ರೆಸ್‌ನ ನೈಜ ಮುಖವಾಡ ಕಳಚಿಬಿದ್ದಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ನೂತನ ಸಂಪುಟ ಸೇರ್ಪಡೆ ವೇಳೆ ಅಧಿಕೃತ ಪಟ್ಟಿಯಲ್ಲಿದ್ದ ಹಿಂದುಳಿದ ವರ್ಗದ ಮಹಿಳಾ ನಾಯಕಿಯ ಹೆಸರನ್ನು ಕೊನೆ ಕ್ಷಣದಲ್ಲಿ ತೆಗೆದುಹಾಕಿ, ಪ್ರಮಾಣವಚನ ಸ್ವೀಕರಿಸದಂತೆ ತಡೆದಿರುವುದು ಇಡೀ ಮಹಿಳಾ ಕುಲಕ್ಕೆ ಹಾಗೂ ಹಿಂದುಳಿದ ವರ್ಗಕ್ಕೆ ಮಾಡಿದ ಬಹಿರಂಗ ಅವಮಾನವಾಗಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಕ್ಯಾಮೆರಾಗಳ ಮುಂದೆ ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಮಾಡುವ ರಾಹುಲ್ ಗಾಂಧಿ, ನೈಜ ಅಧಿಕಾರ ಮತ್ತು ಆಡಳಿತದ ವಿಷಯ ಬಂದಾಗ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಸಂಸತ್ತಿನಲ್ಲಿ ದಶಕಗಳ ಕಾಲ ಮಹಿಳಾ ಮೀಸಲಾತಿ ವಿಧೇಯಕವನ್ನು ತಡೆಹಿಡಿದಿದ್ದ ಕಾಂಗ್ರೆಸ್, ಈಗ ಕರ್ನಾಟಕದಲ್ಲೂ ಹಿಂದುಳಿದ ವರ್ಗದ ಮಹಿಳೆಗೆ ಸಂಪುಟದ ಬಾಗಿಲನ್ನು ಮುಚ್ಚಿ ಸಾರ್ವಜನಿಕವಾಗಿ ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮಹಿಳಾ ಹಕ್ಕುಗಳ ವಿರೋಧಿ, ಸಮಾನ ಪ್ರಾತಿನಿಧ್ಯದ ವಿರೋಧಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದ ಜನರು ಕಾಂಗ್ರೆಸ್‌ನ ಈ ನಕಲಿ ಘೋಷಣೆಗಳು ಹಾಗೂ ಬೂಟಾಟಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಆರ್ ಅಶೋಕ್ ಹೇಳಿದ್ದಾರೆ.



