ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ '#AskHDK' ವಿಶೇಷ ವೇದಿಕೆಯ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಯುವಜನರು, ಸೋಷಿಯಲ್ ಮೀಡಿಯಾ ಪ್ರಭಾವಿಗಳು ಹಾಗೂ ನಾಗರಿಕರೊಂದಿಗೆ ಮುಕ್ತ ಸಂವಾದ ನಡೆಸಿದರು.
ಈ ಸಂವಾದ ಕಾರ್ಯಕ್ರಮದಲ್ಲಿ ಜೆನ್-ಜಿ ಯುವಕರು, ಯೂಟ್ಯೂಬರ್‌ಗಳು, ಸಾಮಾಜಿಕ ಮಾಧ್ಯಮದ ಇನ್‌ಫ್ಲುಯೆನ್ಸರ್‌ಗಳು, ವಕೀಲರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ನೆರೆದಿದ್ದ ಭಾಗವಹಿಸಿದವರು ಕೇಳಿದ ಹಲವು ತೀಕ್ಷ್ಣ ಪ್ರಶ್ನೆಗಳಿಗೆ ಕುಮಾರಸ್ವಾಮಿಯವರು ದಾಖಲೆಗಳ ಸಮೇತ ಸಮಗ್ರವಾಗಿ ಮತ್ತು ವಿವರವಾಗಿ ಉತ್ತರ ನೀಡಿದರು.
ಪ್ರಮುಖವಾಗಿ ಚರ್ಚೆಯಾದ ವಿಷಯಗಳು: ನೈಸ್ ಯೋಜನೆಯ ಅಕ್ರಮ: ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ಹೆಸರಿನಲ್ಲಿ ನಡೆದಿರುವ ಅಕ್ರಮಗಳು ಮತ್ತು ಬಿಡದಿ ಟೌನ್‌ಶಿಪ್ ನೆಪದಲ್ಲಿ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಮಾಡಿರುವ ಕುರಿತು ಪ್ರಮುಖವಾಗಿ ಚರ್ಚಿಸಲಾಯಿತು.
KPSC ಕರ್ಮಕಾಂಡ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ನೇಮಕಾತಿ ಗೊಂದಲಗಳ ಕುರಿತು ಯುವಜನರು ಕೇಳಿದ ಪ್ರಶ್ನೆಗಳಿಗೆ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಯುವಜನರ ಪ್ರಶ್ನೆಗಳಲ್ಲಿ ರಾಜ್ಯದ ಹಿತ ಅಡಗಿದೆ: ಸಂವಾದದ ನಂತರ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, "ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ನಡೆದ ಈ ಸಂವಾದವು ಅತ್ಯಂತ ಅರ್ಥಪೂರ್ಣವಾಗಿದ್ದು, ಅನೇಕ ಹೊಸ ಒಳನೋಟಗಳನ್ನು ನೀಡಿದೆ. ಇಲ್ಲಿ ಭಾಗವಹಿಸಿದ್ದ ಪ್ರತಿಭಾನ್ವಿತ ಯುವಜನರು ಕೇಳಿದ ಪ್ರಶ್ನೆಗಳಲ್ಲಿ ರಾಜ್ಯದ ಹಿತ ಅಡಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ" ಎಂದು ಅಭಿಪ್ರಾಯಪಟ್ಟರು.




