ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಕ್ರೇಜಿ ಸ್ಟಾರ್’ ವಿ. ರವಿಚಂದ್ರನ್ ಅವರು ಶೀಘ್ರದಲ್ಲೇ ರಾಜಕೀಯ ಅಖಾಡಕ್ಕೆ ಧುಮುಕುವುದು ಬಹುತೇಕ ಖಚಿತವಾಗಿದೆ.
ಕನ್ನಡ ಚಿತ್ರರಂಗದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಲ್ಲಿಸಿದ ಅಪಾರ ಕಲಾ ಸೇವೆಯನ್ನು ಗುರುತಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಸಿದ್ಧತೆ ನಡೆಸಿದೆ.
ಸಿಎಂ ಭೇಟಿ ಬೆನ್ನಲ್ಲೇ ರಾಜಕೀಯ ಸಂಚಲನ:
ಇತ್ತೀಚಿಗಷ್ಟೇ ನಟ ರವಿಚಂದ್ರನ್‌ಅವರು ತಮ್ಮ ಬಾಲ್ಯದ ಸ್ನೇಹಿತ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಈ ಭೇಟಿಯ ಹಿಂದೆ ಯಾವ ಉದ್ದೇಶವಿರಬಹುದು ಎಂಬ ಕುತೂಹಲ ಸಾರ್ವಜನಿಕರಲ್ಲಿ ಹಾಗೂ ಅವರ ಅಭಿಮಾನಿಗಳಲ್ಲಿ ಮನೆಮಾಡಿತ್ತು. ಇದೀಗ ಆ ಭೇಟಿಯ ಅಸಲಿ ಸತ್ಯ ಹೊರಬಿದ್ದಿದ್ದು, ರವಿಚಂದ್ರನ್ ಅವರ ಮೇಲ್ಮನೆ ಪ್ರವೇಶದ ಹಾದಿ ಸುಗಮವಾಗಿದೆ.
ಕಾಂಗ್ರೆಸ್ ಹೈಕಮಾಂಡ್‌ಗ್ರೀನ್ ಸಿಗ್ನಲ್:
ಡಿ.ಕೆ. ಶಿವಕುಮಾರ್ ಅವರ ಶಾಲಾ ದಿನಗಳ ಸಹಪಾಠಿ (ಕ್ಲಾಸ್‌ಮೇಟ್) ಆಗಿರುವ ರವಿಚಂದ್ರನ್ ಅವರ ಹೆಸರನ್ನು 'ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರ'ದ ಕೋಟಾದಿಂದ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲು ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ಹಸಿರು ನಿಶಾನೆ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹೊಸ ಮೆರುಗು ನೀಡಿದ ರವಿಚಂದ್ರನ್ ಅವರ ರಾಜಕೀಯ ಪ್ರವೇಶ ರಾಜ್ಯದ ಸಾಂಸ್ಕೃತಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಈ ಕುರಿತು ಶೀಘ್ರದಲ್ಲೇ ಸರ್ಕಾರದ ಕಡೆಯಿಂದ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.




