ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಪೊಲೀಸ್ ಠಾಣೆಯ ಸಮೀಪದಲ್ಲೇ ಹಾಡುಹಗಲೇ ಮನೆಯೊಂದರ ಬೀಗ ಮುರಿದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಹೆಗ್ಗೆರೆ ಮಹಾರುದ್ರಪ್ಪ ಅವರ ಪತ್ನಿ ಹೇಮಲತಾ ಅವರು ಜಮೀನಿಗೆ ತೆರಳಿದ್ದ ಸಮಯದಲ್ಲಿ ಈ ಕಳವು ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿದ ಖದೀಮರು, ಕದ ಮುರಿದು ಒಳನುಗ್ಗಿ ಸುಮಾರು 8 ತೊಲ ಬಂಗಾರದ ಒಡವೆ ಹಾಗೂ 1,000 ನಗದನ್ನು ದೋಚಿದ್ದಾರೆ.
ಘಟನೆಯ ವಿವರ: ಕಳ್ಳತನ ನಡೆಯುತ್ತಿದ್ದ ವೇಳೆಯಲ್ಲಿ ಪಕ್ಕದ ಮನೆಯ ಪಾರ್ವತಮ್ಮ ಎಂಬುವರು ಅನುಮಾನಗೊಂಡು ಮನೆಯ ಹಿಂಭಾಗದಿಂದ ಹೋಗಿ ನೋಡಿದ್ದಾರೆ. ಒಳಗೆ ಯಾರೋ ಇರುವುದನ್ನು ಕಂಡು ‘ಯಾರು ನೀನು?’ ಎಂದು ಪ್ರಶ್ನಿಸಿದಾಗ, ಕಳ್ಳನು ‘ಅಜ್ಜಿ ಇದೆ.. ಅಜ್ಜಿ ಇದೆ..’ ಎಂದು ತೊದಲುತ್ತಾ ಹೊರ ಓಡಿದ್ದಾನೆ. ತಕ್ಷಣ ಪಾರ್ವತಮ್ಮ ಅವರು ‘ಕಳ್ಳ ಕಳ್ಳ’ ಎಂದು ಕೂಗಿಕೊಂಡರೂ ಅಷ್ಟರಲ್ಲಾಗಲೇ ಖದೀಮ ಕಣ್ಮರೆಯಾಗಿದ್ದಾನೆ.
ಗ್ರಾಮದ ಪಕ್ಕದಲ್ಲಿ ಮೂರು ಚಕ್ರದ ಆಟೋವೊಂದನ್ನು ನಿಲ್ಲಿಸಲಾಗಿತ್ತು. ಕಳ್ಳರು ಅದೇ ಆಟೋದಲ್ಲಿ ಬಂದಿರಬಹುದು ಹಾಗೂ ಅದೇ ವಾಹನದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ: ಘಟನಾ ಸ್ಥಳದಿಂದ ಕೇವಲ 2 ಕಿಲೋಮೀಟರ್ ದೂರದಲ್ಲೇ ಪೊಲೀಸ್ ಠಾಣೆ ಇದ್ದರೂ, ಕಳ್ಳರು ಯಾವುದೇ ಭಯವಿಲ್ಲದೆ ಹಾಡುಹಗಲೇ ಈ ರೀತಿ ಕೃತ್ಯ ಎಸಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಷ್ಟಪಟ್ಟು ದುಡಿದು ಮಕ್ಕಳ ಮದುವೆಗಾಗಿ ಮಾಡಿಸಿಟ್ಟಿದ್ದ ಆಭರಣಗಳು ಕಳ್ಳರ ಪಾಲಾಗಿರುವುದರಿಂದ ಕುಟುಂಬಸ್ಥರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ.
ರಕ್ಷಣಾ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಈ ಕಳ್ಳರ ಜಾಲವನ್ನು ಪತ್ತೆ ಹಚ್ಚಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಕ್ಷೇತ್ರದಲ್ಲಿ ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.




