ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಲೆಗಳಲ್ಲಿ ಮಕ್ಕಳೆಲ್ಲರೂ ಸಮಾನವಾಗಿರಬೇಕು ಎಂಬ ಉದಾತ್ತ ಉದ್ದೇಶದಿಂದ 1969ರಿಂದಲೇ ಸಮವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಆದರೆ ಶಾಲಾ ಆವರಣದೊಳಗೆ ಮತೀಯ ಚಿಹ್ನೆಗಳನ್ನು ತರುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, "ಕಾಂಗ್ರೆಸ್ ಸರ್ಕಾರವು ಕೂಡಲೇ ತನ್ನ ಮತೀಯ ನೀತಿಯನ್ನು ಕೈಬಿಡಬೇಕು. ಶಾಲೆಗಳಲ್ಲಿ ಎಲ್ಲ ಧರ್ಮದ ಮಕ್ಕಳನ್ನು ಸಮಾನವಾಗಿ ಕಾಣುವ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು" ಎಂದು ಒತ್ತಾಯಿಸಿದ್ದಾರೆ.
ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಮತ್ತು ಮತೀಯ ಧ್ರುವೀಕರಣ ಸಲ್ಲದು ಎಂದಿರುವ ಅವರು, ನಿಯಮಾವಳಿಗಳ ಪ್ರಕಾರ ಸಮವಸ್ತ್ರದ ಪವಿತ್ರತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ನೆನಪಿಸಿದ್ದಾರೆ.


