ಚಂದ್ರವಳ್ಳಿ ನ್ಯೂಸ್, ವಿಜಯಪುರ:
"ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಗೊಂದಲಗಳಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಅನುಭವಿಸಿದ ಮಾನಸಿಕ ಯಾತನೆ ಮತ್ತು ಯುವ ಸಮೂಹ ನಡೆಸಿದ ಸುದೀರ್ಘ ಹೋರಾಟಕ್ಕೆ ಕೊನೆಗೂ ಕೇಂದ್ರ ಸರ್ಕಾರ ತಲೆಬಾಗಿದೆ. ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಬೆದರಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ," ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
47 ದಿನಗಳ ಕಾಲ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ:
ನೀಟ್ ಪರೀಕ್ಷೆಯ ಎಡವಟ್ಟುಗಳನ್ನು ಪ್ರಸ್ತಾಪಿಸಿದ ಎಂ.ಬಿ. ಪಾಟೀಲ್, "ಸುಮಾರು 47 ದಿನಗಳ ಕಾಲ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡಿದೆ. ಪರಿಣಾಮವಾಗಿ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಎರಡನೇ ಬಾರಿ ನಡೆಸಲಾದ ನೀಟ್ ಪರೀಕ್ಷೆಗೆ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಹಾಜರಾಗದೇ ಇರುವುದೇ ಈ ಭ್ರಷ್ಟ ವ್ಯವಸ್ಥೆಗೆ ಸಾಕ್ಷಿ. ಇಷ್ಟೆಲ್ಲಾ ಆದರೂ ಕುಂಭಕರ್ಣ ನಿದ್ದೆಯಲ್ಲಿದ್ದ ಕೇಂದ್ರ ಸರ್ಕಾರ ಕೊನೆಗೂ ರಾಜೀನಾಮೆ ಪಡೆದುಕೊಂಡಿದೆ," ಎಂದರು.
‘ಅಚ್ಚೇ ದಿನ್’ ಭರವಸೆ ಹುಸಿಯಾಗಿದೆ:
2014ರಲ್ಲಿ 'ಅಚ್ಚೇ ದಿನ್' (ಒಳ್ಳೆಯ ದಿನಗಳು) ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದಂತೆ ಸರಣಿ ಜನವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎಥನಾಲ್ ಮಿಶ್ರಿತ ಇಂಧನ ನೀತಿಗೂ ವಿರೋಧ:
ಇದೇ ವೇಳೆ ಎಥನಾಲ್ ಮಿಶ್ರಿತ ಇಂಧನ ಬಳಕೆಯ ಕುರಿತು ಪ್ರಸ್ತಾಪಿಸಿದ ಅವರು, "ಅವಿಜ್ಞಾನಿಕ ನಿರ್ಧಾರಗಳನ್ನು ಜಾರಿಗೊಳಿಸುವ ಮೊದಲು ಸಮಗ್ರ ವೈಜ್ಞಾನಿಕ ಅಧ್ಯಯನ, ವಾಹನ ತಯಾರಕರ ಅಭಿಪ್ರಾಯ ಹಾಗೂ ದೀರ್ಘಾವಧಿಯ ಪರಿಣಾಮಗಳ ಕುರಿತು ವ್ಯಾಪಕ ಪರಿಶೀಲನೆ ನಡೆಸಬೇಕಿತ್ತು. ಈ ವಿಷಯ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆ ಹಾಗೂ ಹೋರಾಟಕ್ಕೆ ಹಾದಿಮಾಡಿಕೊಡಲಿದೆ," ಎಂದು ಎಚ್ಚರಿಸಿದರು.



