ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಿಲಾಜನಹಳ್ಳಿ, ಹಂದಿಗನಡು, ಎಸ್‌ಕೆ ಕಾಲೋನಿ, ಕೆ.ಕೆ.ಹಟ್ಟಿ, ಬ್ಯಾರಮಾಡು ಹಾಗೂ ಶೇಷಪ್ಪನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಹಾಹಾಕಾರ ಎದುರಾಗಿದೆ. ಸಮಯಕ್ಕೆ ಸರಿಯಾಗಿ ಮುಂಗಾರು ಮಳೆ ಬಾರದೆ ಈ ಭಾಗದ ರೈತರ ಬದುಕು ಸಂಪೂರ್ಣ ನಶಿಸಿಹೋಗಿದ್ದು, ಸರಕಾರ ತಕ್ಷಣವೇ ಸ್ಪಂದಿಸಬೇಕೆಂದು ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಆರ್. ಒತ್ತಾಯಿಸಿದ್ದಾರೆ.
ಈ ಭಾಗದ ಗ್ರಾಮಗಳಲ್ಲಿ ಹೈನುಗಾರಿಕೆಯನ್ನು ಯಥೇಚ್ಛವಾಗಿ ನೆಚ್ಚಿಕೊಂಡಿದ್ದು, ದಿನಕ್ಕೆ ಸುಮಾರು 2,000 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ ಮಳೆ ಇಲ್ಲದೆ ಅಂತರ್ಜಲ ಮಟ್ಟ 1,200 ರಿಂದ 1,300 ಅಡಿ ಆಳಕ್ಕೆ ಕುಸಿದಿದ್ದು, ಬೋರ್‌ವೆಲ್ ಕೊರೆಸಿದರೂ ನೀರು ಸಿಗದಂತಾಗಿದೆ. ಒಂದೇ ಬೋರ್‌ವೆಲ್ ಕೊರೆಸಲು 2 ಲಕ್ಷ ರೂಪಾಯಿ ವೆಚ್ಚವಾಗುತ್ತಿದ್ದು, ನೀರು ಬಂದು ಸಂಪೂರ್ಣ ವ್ಯವಸ್ಥೆಯಾಗಲು 5 ಲಕ್ಷ ರೂಪಾಯಿ ಬೇಕಾಗುತ್ತದೆ. ಇದರಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬರಪೀಡಿತ ಪ್ರದೇಶ ಘೋಷಣೆ: ಹಿರಿಯೂರು ತಾಲೂಕನ್ನು ಕೂಡಲೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಜಾನುವಾರುಗಳ ರಕ್ಷಣೆಗಾಗಿ ತಕ್ಷಣವೇ ಗೋಶಾಲೆಗಳನ್ನು ತೆರೆಯಬೇಕು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆ: ಬಹುದಿನಗಳ ಬೇಡಿಕೆಯಾಗಿರುವ ಕಲ್ವಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಬೇಕು.
ಮಳೆಯಿಲ್ಲದೆ ತತ್ತರಿಸುತ್ತಿರುವ ಈ ಭಾಗದ ಜನರ ಮತ್ತು ಜಾನುವಾರುಗಳ ಹಿತದೃಷ್ಟಿಯಿಂದ ಸರಕಾರ ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕೆಂದು ಜಯಪ್ರಕಾಶ್ ಆರ್. ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.



