ಚಂದ್ರವಳ್ಳಿ ನ್ಯೂಸ್, ಮೈಸೂರು:
ಪವಿತ್ರ ಆಷಾಢ ಮಾಸದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಂಸ್ಕೃತಿಕ ನಗರಿ ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ದಿವ್ಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯಕ್ಕೆ ಭೇಟಿ ನೀಡಿ ತಾಯಿಯ ಕೃಪೆಗೆ ಪಾತ್ರರಾದ ನಂತರ ಮಾತನಾಡಿದ ಅವರು, "ತೇಜೋಮಯಿ ದಯಾಪೂರ್ಣೇ ಸಚ್ಚಿದಾನಂದರೂಪಿಣಿ | ಸರ್ವವರ್ಣಾತ್ಮಿಕೇ ತುಭ್ಯಂ ಚಾಮುಂಡಾಯೈ ಸುಮಂಗಲಂ" ಎಂದು ಶ್ಲೋಕದ ಮೂಲಕ ಚಾಮುಂಡೇಶ್ವರಿ ತಾಯಿಯನ್ನು ಸ್ಮರಿಸಿದರು.
ಆಷಾಢ ಮಾಸದಲ್ಲಿ ಚಾಮುಂಡಿ ತಾಯಿಯ ದರ್ಶನ ಪಡೆಯುವುದು ಶ್ರೇಷ್ಠ ಹಾಗೂ ಸೌಭಾಗ್ಯದ ಸಂಗತಿ. ರಾಜ್ಯದಲ್ಲಿ ಉತ್ತಮ ಮಳೆಯಾಗಿ, ಕೆರೆ-ಕಟ್ಟೆಗಳು ತುಂಬಿ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿದ್ದೇನೆ. ಜೊತೆಗೆ ನಾಡಿನ ಸಮಸ್ತ ಜನರ ಮನೆಗಳಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ ಎಂದು ತಾಯಿಯ ಸನ್ನಿಧಿಯಲ್ಲಿ ಕೋರಿಕೊಂಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ನಾಯಕರು ಹಾಗೂ ದೇವಾಲಯದ ಪೂಜಾರಿಗಳು ಉಪಸ್ಥಿತರಿದ್ದರು.



