ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರದ ಸೀರೆಗಳಿಗೆ ಒಂದು ಬ್ರಾಂಡ್ ಬೇಕು ಎನ್ನುವುದಕ್ಕಿಂತ ದೊಡ್ಡಬಳ್ಳಾಪುರವೇ ಒಂದು ಬ್ರಾಂಡ್ ಆಗಿ, ಇಲ್ಲಿನ ನೇಕಾರರ ದೊಡ್ಡಬಳ್ಳಾಪುರ ಸೀರೆಯೆಂದೇ ಪ್ರಸಿದ್ದಿಯಾಗಬೇಕು. ಈ ನಿಟ್ಟಿನಲ್ಲಿ ಪ್ರತ್ಯೇಕ ವಿದ್ಯುತ್ ಮಗ್ಗಗಳ ಮಂಡಲಿ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿ, ನೇಕಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ಡಿ.ಪಿ.ವಿ. ಕನ್ವೆಂನ್ಷನ್ ಹಾಲ್ ನಲ್ಲಿ ದೊಡ್ಡಬಳ್ಳಾಪುರ ನೇಕಾರರ ಸಂಘಟನೆಗಳ ಒಕ್ಕೂಟದಿಂದ ನಡೆದ ದೊಡ್ಡಬಳ್ಳಾಪುರದ ಸೀರೆ ಬಾಕ್ಸ್ ಲೋಗೋ ಬಿಡುಗಡೆ ಮಾಡಿ, ನೇಕಾರರಿಂದ ನಡೆದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ವಿದ್ಯುತ್ ಮಗ್ಗಗಳ ನೇಕಾರರು ನಾವು ಹೆಮ್ಮೆಯಿಂದ ನಾವು ವಿದ್ಯುತ್ ಮಗ್ಗದಲ್ಲೇ ನೇಯುತ್ತಿದ್ದೇವೆ ಅಂತ ನಾವು ಹೆಮ್ಮೆಯಿಂದ ಹೇಳಿಕೊಳ್ಳಬೇಕು.
ವಿದ್ಯುತ್ ಮಗ್ಗಗಳ ವ್ಯಾಪ್ತಿಯೂ ಕೈಮಗ್ಗ ಇಲಾಖೆಯಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯುತ್ ಮಗ್ಗಗಳ ನೇಕಾರರಿಗೆ ಹೆಚ್ಚಿನ ಯೋಜನೆಗಳನ್ನು ರೂಪಿಸಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ವಿದ್ಯುತ್ ಮಗ್ಗಗಳ ಮಂಡಲಿ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ನೇಕಾರರು ಹಿಂದಿನಿಂದಲೂ ಹಲವಾರು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದಾರೆ. ಮಾಜಿ ಸಚಿವರಾಗಿದ್ದ ಆರ್.ಎಲ್.ಜಾಲಪ್ಪ, ನೇಕಾರರ ಸಮಸ್ಯೆಗಳಿಗೆ ಸ್ಪಂಧಿಸಿದ್ದರು. ಇಂದು ಕೆ.ಎಂ.ಹನುಮಂತರಾಯಪ್ಪ ಮೊದಲಾದವರು ನೇಕಾರರ ಸಮಸ್ಯೆಗಳಿಗೆ ದನಿ ಎತ್ತಿ, ಸರ್ಕಾರದಿಂದ ಆಗಬೇಕಾದ ಕೆಲಸ ಮಾಡಿಸುತ್ತಿದ್ದಾರೆ.
ನೇಕಾರರು ತಮ್ಮದೇ ಆದ ಕಲಾ ನೈಪುಣ್ಯದ ಬಟ್ಟೆಗಳನ್ನು ತಯಾರು ಮಾಡಿ ನಿಮ್ಮದೇ ಮಳಿಗೆಗಳ ಮೂಲಕ ಮಾರಾಟ ಮಾಡಬೇಕಿದೆ. ನಗರದ ಹೊರವಲಯದ ಕುರುಬರ ಹಳ್ಳಿ ರಸ್ತೆಯಲ್ಲಿ ರೇಷ್ಮೆ ಇಲಾಖೆಯಿಂದ ಜವಳಿ ಇಲಾಖೆಗೆ 2 ಎಕರೆ ಜಮೀನು ಹಸ್ತಾಂತರವಾಗಿದ್ದು, ಶಿವಾನಂದ ಪಾಟೀಲ್ ಜವಳಿ ಸಚಿರಾಗಿದ್ದಾಗ ಇಲ್ಲಿ ಜವಳಿ ಸಮುಚ್ಛಯಕ್ಕೆ ಮನವಿ ಮಾಡಲಾಗಿತ್ತು. ಇಲ್ಲಿ ಒಂದು ರೀತಿಯ ಜವಳಿ ಮಾಲ್ ತಲೆ ಎತ್ತಲಿದೆ.
ನೇಕಾರರ ಸೊಸೈಟಿಗಳನ್ನು ಸ್ಸ್ಥಾಪಿಸುವ ಮೂಲಕ ನೇಕಾರರಿಗೆ ದುಡಿಯುವ ಬಂಡವಾಳಕ್ಕೆ ಶೇ.4 ಬಡ್ಡಿದರದಲ್ಲಿ ಸಾಲ ನೀಡಲು ಸರ್ಕಾರದ ಗಮನಕ್ಕೆ ತರಲಾಗುವುದು. ಸೂರತ್ ಸೀರೆಗಳು ಹೆಚ್ಚು ಆಮದಾಗುವ ಆತಂಕ ದೂರ ಮಾಡಲು ನೇಕಾರರು ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ ಎಂದರು.
ಸೀರೆ ಸಂತೆ ಆಯೋಜನೆ : ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಫೆಬ್ರವರಿಯಂದು ನಡೆದ ಸೀರೆ ಸಂತೆ ಯಶಸ್ವಿಯಾಗಿದೆ. ಇದಕ್ಕೆ ಕಾರಣ ನಮ್ಮ ಒಳ್ಳೆಯ ಉದ್ದೇಶ ಹಾಗೂ ನೇಕಾರರ ಸಹಕಾರ. ಇದರಿಂದ ಹಲವಾರು ನೇಕಾರರಿಗೆ ಅನುಕೂಲವಾಗಿದ್ದು, ದೊಡ್ಡಬಳ್ಳಾಪುರದ ಸೀರೆಗಳನ್ನು ಖರೀದಿ ಮಾಡಲು ನಮ್ಮ ಬಳಿಯೇ ವಿಚಾರಿಸುತ್ತಿದ್ದಾರೆ. ಮುಂದಿನ ವರ್ಷವೂ ಸಹ ಫೆಬ್ರವರಿಯಲ್ಲಿ ಸೀರೆ ಸಂತೆ ಆಯೋಜನೆ ಮಾಡಲಾಗುತ್ತಿದ್ದು, ಸುಮಾರು 300 ನೇಕಾರರಿಗೆ ಮಳಿಗೆ ಸೌಲಭ್ಯ ಕಲ್ಪಿಸುವ ಚಿಂತನೆಯಿದೆ ಎಂದರು.
ಸಮಸ್ಯೆ ನಮ್ಮ ಬಳಿ ಹೇಳಿ : ಬಾಗಿನ ನೀಡಲು ದೊಡ್ಡಬಳ್ಳಾಪುರದ ನೇಕಾರರ ಸೀರೆಗಳನ್ನೇ ಬಳಸಿಕೊಳ್ಳಿ ಎಂದು ಒತ್ತಾಯ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು ಯಾವುದೇ ಸಮಸ್ಯೆ ಮೊದಲು ನಮ್ಮ ಬಳಿ ಹೇಳಬೇಕು. ನಾವು ಮಾಡದಿದ್ದರೆ ಆನಂತರ ಬೇರೆ ಕ್ರಮ ಕೈಗೊಳ್ಳಬೇಕು. ನಮಗೆ ಯಾರೂ ಮನವಿ ಸಹ ಮಾಡಿಲ್ಲ. ನಾನು ದೊಡ್ಡಬಳ್ಳಾಪುರ ತಾಲೂಕನ್ನು ಬರ ಪೀಡಿತ ತಾಲೂಕಾಗಿ ಘೋಷಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇನೆ ಎಂದರು.
ಚಿಕ್ಕಬಳ್ಳಾಪುರದ ಕಳವಾರ ಓಂಕಾರ ಜ್ಯೋತಿ ಮಠದ ಕಾಳೀತನಯ ಡಾ. ಶ್ರೀ ಉಮಾಮಹೇಶ್ವರ ಸ್ವಾಮೀಜಿ ಮಾತನಾಡಿ, ಬಟ್ಟೆ ನೇಯುವುದು ಬರೀ ಕಾಯಕವಲ್ಲ ಅದು ಒಂದು ಸಂಸ್ಕೃತಿಯ ಭಾಗವಾಗಿದ್ದು, ಸಂಸ್ಕೃತಿಯನ್ನು ನಡೆಸಿಕೊಂಡು ಬರುತ್ತಿರುವ ನೇಕಾರರ ಸಮಸ್ಯೆಗಳ ಬಗೆಹರಿದು ಅವರ ಪರಿಸ್ಥಿತಿ ಸುಧಾರಿಸಬೇಕಿದೆ ಎಂದರು.
ನೇಕಾರರ ಫೆಡರೇಷನ್ ಅಧ್ಯಕ್ಷ ಪಿ.ಸಿ. ವೆಂಕಟೇಶ್ ಮಾತನಾಡಿ, ನಡೆದ ಸೀರೆ ಸಂತೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ನೇಕಾರರಿಗೆ ಹೊಸ ಭರವಸೆ ಮೂಡಿದೆ.
ದೊಡ್ಡಬಳ್ಳಾಪುರಕ್ಕೆ ತನ್ನದೇ ಆದ ಬ್ರಾಂಡ್ ಸೃಷ್ಟಿಯಾಗಬೇಕಿದೆ. ಇತ್ತೀಚೆಗೆ ದೊಡ್ಡಬಳ್ಳಾಪುರದಲ್ಲಿ ರೀಟೈಲ್ ಮಾರಾಟ ಮಳಿಗೆಗಳು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಈ ದಿಸೆಯಲ್ಲಿ ನೇಕಾರರು ದೊಡ್ಡಬಳ್ಳಾಪುರದ ಲೋಗೋ ಇರುವ ಸೀರೆ ಬಾಕ್ಸ್ ಗಳ ಮೂಲಕ ಮಾರಾಟ ಮಾಡುವಂತೆ ಮನವಿ ಮಾಡಿದರು.
ನೇಕಾರರ ಸಂಘಟನೆಗಳ ಒಕ್ಕೂಟದ ವತಿಯಿಂದ ಶಾಸಕ ಧೀರಜ್ ಮುನಿರಾಜು ಅವರಿಗೆ ನೇಕಾರ ಕಣ್ಮಣಿ ಬಿರುದು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಆರ್.ಪ್ರಭಾ ನಾಗರಾಜ್, ಉಪಾಧ್ಯಕ್ಷ ಬಂತಿ ವೆಂಕಟೇಶ್, ದೇವಾಂಗ ಮಂಡಲಿ ಅಧ್ಯಕ್ಷ ಎಂ.ಜಿ.ಶ್ರೀನಿವಾಸ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ನೇಕಾರ ಸಂಘಟನೆಗಳ ಒಕ್ಕೂಟದ ಮುಖಂಡರಾದ ಡಿ.ಎಂ.ಚಂದ್ರಶೇಖರ್, ಎಸ್.ವೇಣುಗೋಪಾಲ್, ಎಸ್.ಪ್ರಕಾಶ್, ಸಿ.ವಿ.ಪಿ ವೆಂಕಟೇಶ್, ಟಿ.ಎನ್.ತಿಮ್ಮರಾಜು, ಪ್ರಭಾಕರ್, ಲಕ್ಷ್ಮೀಪತಿ, ಡಿ.ಪಿ.ಲೋಕೇಶ್, ಜಗದೀಶ್, ಶ್ರೀನಿವಾಸ್ ಮೊದಲಾದವರು ಹಾಜರಿದ್ದರು.




