ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಕಳೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಅವಧಿಯಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೃಹತ್ ಪ್ರಮಾಣದ ದೇಣಿಗೆ ಸಂಗ್ರಹಿಸುವ ಮೂಲಕ ಕಾಂಗ್ರೆಸ್‌ಗಿಂತ ಬಹುಪಟ್ಟು ಮುನ್ನಡೆ ಸಾಧಿಸಿದೆ. ಚುನಾವಣಾ ಆಯೋಗಕ್ಕೆ (EC) ಸಲ್ಲಿಕೆಯಾಗಿರುವ ವೆಚ್ಚದ ವರದಿಗಳ ಪ್ರಕಾರ, ಬಿಜೆಪಿ ತನ್ನ ಕೇಂದ್ರ ಪ್ರಧಾನ ಕಚೇರಿಯೊಂದರಲ್ಲೇ ಸುಮಾರು 1,473 ಕೋಟಿ ರೂ. ದೇಣಿಗೆ ಪಡೆದಿದೆ.
ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಕೇಂದ್ರ ಮತ್ತು ಐದು ರಾಜ್ಯ ಘಟಕಗಳಿಂದ ಒಟ್ಟು 207 ಕೋಟಿ ರೂ. ಆದಾಯ ಗಳಿಸಿರುವುದಾಗಿ ವರದಿ ಮಾಡಿದೆ. ಈ ಮೂಲಕ ಬಿಜೆಪಿ ಸಂಗ್ರಹಿಸಿದ ದೇಣಿಗೆಯು ಕಾಂಗ್ರೆಸ್‌ನ ಒಟ್ಟು ಆದಾಯಕ್ಕಿಂತ ಏಳು ಪಟ್ಟು ಹೆಚ್ಚು ಎಂಬುದು ಬಹಿರಂಗವಾಗಿದೆ.
ಆದಾಯ ಮತ್ತು ವೆಚ್ಚದ ಲೆಕ್ಕಾಚಾರ: ಮಾರ್ಚ್ 15 ರಿಂದ ಮೇ 6 ರವರೆಗಿನ ಚುನಾವಣಾ ಅವಧಿಯಲ್ಲಿ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ರಾಜ್ಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ 207.17 ಕೋಟಿ ರೂ. ಆದಾಯ ಹಾಗೂ 248.55 ಕೋಟಿ ರೂ. ವೆಚ್ಚವನ್ನು ವರದಿ ಮಾಡಿದೆ.
ಬಿಜೆಪಿ ಕಚೇರಿಯ ಆದಾಯ: ಬಿಜೆಪಿಯ 1,472.8 ಕೋಟಿ ರೂ. ಆದಾಯವು ಕೇವಲ ದೆಹಲಿಯ ಕೇಂದ್ರ ಪ್ರಧಾನ ಕಚೇರಿಗೆ ಬಂದಿರುವುದಾಗಿದೆ. ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯ ಘಟಕಗಳ ಸಂಪೂರ್ಣ ವೆಚ್ಚದ ವಿವರಗಳು ಸಾರ್ವಜನಿಕಗೊಳ್ಳಬೇಕಿದ್ದು, ಈ ಮೊತ್ತ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಬಿಜೆಪಿ ಖಾತೆಯಲ್ಲಿ ಭಾರಿ ಏರಿಕೆ: ಚುನಾವಣೆಯ ನಂತರ ಬಿಜೆಪಿ ತನ್ನ ಹಣಕಾಸಿನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಮಾರ್ಚ್ 15 ರಂದು 6,722.6 ಕೋಟಿ ರೂ.ಗಳಷ್ಟಿದ್ದ ಬಿಜೆಪಿಯ ಆಸ್ತಿ/ಖಾತೆ ಶಿಲ್ಕು (Closing Balance), ಮೇ 6ರ ವೇಳೆಗೆ 7,627.2 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ ಚುನಾವಣಾ ಅವಧಿಯಲ್ಲೇ ಬಿಜೆಪಿಯ ನಿಧಿಯಲ್ಲಿ 904.6 ಕೋಟಿ ರೂ. ಹೆಚ್ಚಳವಾಗಿದೆ.
ಕಾಂಗ್ರೆಸ್ ನಿಧಿಯಲ್ಲಿ ಕುಸಿತ: ಮತ್ತೊಂದೆಡೆ, ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ತೀವ್ರ ಆರ್ಥಿಕ ಕುಸಿತ ಎದುರಿಸಿದೆ. ಮಾರ್ಚ್ 15 ರಂದು ಕೇಂದ್ರ ಹಾಗೂ 5 ರಾಜ್ಯ ಘಟಕಗಳ ಖಾತೆಯಲ್ಲಿ ಒಟ್ಟು 169.06 ಕೋಟಿ ರೂ. ಇತ್ತು. ಆದರೆ ಮೇ 6ರ ವೇಳೆಗೆ ಈ ಮೊತ್ತ 103.2 ಕೋಟಿ ರೂ.ಗೆ ಇಳಿಕೆಯಾಗಿದ್ದು, ಕೇವಲ ಒಂದೂವರೆ ತಿಂಗಳಲ್ಲಿ 65.86 ಕೋಟಿ ರೂ.ಗಳಷ್ಟು ನಷ್ಟ ಕಂಡಿದೆ.




