ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೊರಡಿಸಿರುವ ಹೊಸ ಕರಡು ನಿಯಮಾವಳಿಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ವಿದ್ಯುತ್ ಗುತ್ತಿಗೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಇಆರ್‌ಸಿ ಪ್ರಸ್ತಾಪಿಸಿರುವ 'ಗ್ರಾಹಕರಿಂದಲೇ ಸ್ವಯಂ ದೃಢೀಕರಣ' ನಿಯಮವು ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯುತ್ ಗುತ್ತಿಗೆದಾರರಿಗೆ ಮಾರಕವಾಗಿದೆ ಎಂದು ಗುತ್ತಿಗೆದಾರರಾದ ಬಿ ಶಿವಶಂಕರ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದರಿಂದ ರಾಜ್ಯದ 30,000ಕ್ಕೂ ಹೆಚ್ಚು ವಿದ್ಯುತ್‌ಗುತ್ತಿಗೆದಾರರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ತೊಂದರೆ ಆಗಲಿದೆ’ ಎಂದರು.
‘ರಾಜ್ಯ ಸರ್ಕಾರ ಇಲ್ಲಸಲ್ಲದ ಸಬೂಬು ಹೇಳಿ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡುವ ಪ್ರಯತ್ನ ಮಾಡುತ್ತಿದೆ. ಕೆಇಆರ್‌ಸಿ ಬಿಡುಗಡೆ ಮಾಡಿರುವ ವಿದ್ಯುತ್ ಸರಬರಾಜು ನಿಯಮಾವಳಿಗಳ ಪ್ರಕಾರ, ಹೊಸ ವಿದ್ಯುತ್ ಸಂಪರ್ಕ ಪಡೆಯಲು ಕಟ್ಟಡ ಮಾಲೀಕರು ತಾವೇ ಸುರಕ್ಷತಾ ಕ್ರಮಗಳನ್ನು ಪಾಲಿಸಿರುವುದಾಗಿ ಸ್ವಯಂ ದೃಢೀಕರಣ ನೀಡಲು ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಮಾತ್ರ ಈ ಪ್ರಮಾಣಪತ್ರ ನೀಡಲು ಅರ್ಹರಾಗಿದ್ದರು. ವಿದ್ಯುತ್ ಸಂಪರ್ಕಕ್ಕೆ ಗುತ್ತಿಗೆದಾರರ ಅಗತ್ಯವಿಲ್ಲದೇ ಹೋದರೆ, ರಾಜ್ಯದಲ್ಲಿ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಮತ್ತು ಅವರನ್ನು ನಂಬಿರುವ ಲಕ್ಷಾಂತರ ಕಾರ್ಮಿಕರ ಕಥೆ ಏನು ವಿದ್ಯುತ್ ಶಕ್ತಿಯ ತಂತ್ರಜ್ಞಾನದ ಬಗ್ಗೆ ಜ್ಞಾನವಿಲ್ಲದ ಸಾಮಾನ್ಯ ಗ್ರಾಹಕರು ಸ್ವಯಂ ದೃಢೀಕರಣ ಮಾಡಿದರೆ ಮುಂದೆ ವಿದ್ಯುತ್ ಅವಘಡಗಳು ಸಂಭವಿಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜೊತೆಗೂಡಿ ನಾವು ಇಂದು ಸಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದೇವೆ ಕೂಡಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತನ್ನ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಅಗ್ರಹಿಸಿದರು.
ವಿದ್ಯುತ್ ಗುತ್ತಿಗೆದಾರರದ ನವೀನ್ ದೇವ್ ಮಾತನಾಡಿ ವಿದ್ಯುತ್ ತಂತ್ರಜ್ಞಾನದ ಬಗ್ಗೆ ಅರಿವಿಲ್ಲದ ಸಾಮಾನ್ಯ ಗ್ರಾಹಕರು ಸ್ವಯಂ ಘೋಷಣೆ ನೀಡಿ ವಿದ್ಯುತ್ ಸಂಪರ್ಕ ಪಡೆಯುತ್ತಾರೆ ಆದರೆ ಮುಂದೆ ಅವಘಡಗಳು ಸಂಭವಿಸಿದಲ್ಲಿ ಅದರ ಹೊಣೆ ಯಾರದು...?? ವಿದ್ಯುತ್ ಕ್ಷೇತ್ರದಲ್ಲಿ ಪರಿಣಿತಿ ಪಡೆದು ಸೂಕ್ತ ಕ್ರಮಗಳನ್ನು ಕೈಗೊಂಡು ಪ್ರಮಾಣಿಸುವ ವಿದ್ಯುತ್ ಗುತ್ತಿಗೆದಾರರನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪರಿಗಣಿಸುತ್ತಿಲ್ಲ ಈ ನಡೆಯನ್ನು ನಾವು ಖಂಡಿಸುತ್ತೇವೆ ಎಂದರು. ಈ ವೇಳೆ ಲಕ್ಷ್ಮಿ ಕುಮಾರ್, ಬಿ ಎಲ್ ರಾಮ್, ನಾಗೇಶ್, ಮಂಜುನಾಥ್ ಸೇರಿದಂತೆ ಪ್ರಮುಖರು ಹಾಜರಿದ್ದರು.




