ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿದರೆ ಅದು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಕೋಶಾಧ್ಯಕ್ಷ ಜಿ.ಸುರೇಶ್ ತಿಳಿಸಿದರು.
ತಿಮ್ಮಸಂದ್ರ ಗ್ರಾಮದ ಇಂಡಿಯನ್ ಪ್ರೈಡ್ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪರಿಸರದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂಬುದು ವಿದ್ಯಾರ್ಥಿದೆಸೆಯಿಂದಲೇ ಪ್ರಾರಂಭ ಆರಂಭ ಆಗಬೇಕಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ ಎಂದರು.
ಇಂಡಿಯನ್ ಪ್ರೈಡ್ ಶಾಲೆಯ ಗೌರವ ಕಾರ್ಯದರ್ಶಿ ಜಯಭಾರತಿ ಮಾತನಾಡಿ, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು. ಗಾಳಿ, ನೀರು, ಮಣ್ಣು ಮಲಿನವಾಗದಂತೆ ಎಚ್ಚರ ವಹಿಸಬೇಕು. ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಉಳಿಸುವುದು ನಮ್ಮಗಳ ಜವಾಬ್ದಾರಿ. ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು.
ಪರಿಸರ ಸ್ವಚ್ಚತೆಯಿಂದ ಉತ್ತಮ ಆರೋಗ್ಯ ಸಿಗುತ್ತದೆ. ಪರಿಸರ ಪ್ರೀತಿ ಕೇವಲ ಭಾಷಣಗಳಿಗೆ ಮಾತ್ರ ಸೀಮಿತ ಆಗಬಾರದು. ಪರಿಸರ ಉಳಿಸಿ ಬೆಳೆಸಿದವರನ್ನು ಸ್ಮರಿಸಬೇಕಾಗಿದೆ ಎಂದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಪರಿಸರ ಗೀತಗಾಯನ, ಚಿತ್ರಕಲೆ, ನಾಟಕಾಭಿನಯ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



